ಬಸವಕಲ್ಯಾಣ: ಬಸವಾದಿ ಶರಣರ ತತ್ವ, ಸಂದೇಶಗಳ ಪ್ರಚಾರ, ಪ್ರಸಾರದ ಉದ್ದೇಶದಿಂದ ಪ್ರತಿವರ್ಷ ಆಚರಿಸಲಾಗುವ ಕಲ್ಯಾಣ ಪರ್ವವನ್ನು ಅ. 30,31 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಬಸವ ಮಹಾಮನೆಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಕೊರೊನಾ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ 19ನೇ ಕಲ್ಯಾಣ ಪರ್ವಕ್ಕೆ ಭಕ್ತರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ವರ್ಷ ಸಾಂಕೇತಿಕವಾಗಿ ಎರಡು ದಿನ ಆಚರಿಸಲಾಗುತ್ತಿದೆ, ಭಕ್ತರು ಸಹಕರಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಲಿಂಗಾಯತ ಧರ್ಮೀಯರ ಧರ್ಮ ಕ್ಷೇತ್ರಗಳು ಕೂಡಲ ಸಂಗಮ ಮತ್ತು ಬಸವಕಲ್ಯಾಣ ಎಂದು ಗುರುತಿಸಿ ಕೂಡಲ ಸಂಗಮದಲ್ಲಿ ಶರಣ ಮೇಳ ಮತ್ತು ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ಮಾಡಲು ಪ್ರೇರಣೆ ಕೊಟ್ಟು ಬಸವತತ್ವವನ್ನು ಬೆಳೆಸುವ ಉದ್ದೇಶ ಹೊಂದಿದ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಸದಾಕಾಲ ಸ್ಮರಣೀಯರು ಎಂದರು.
ಸ್ವಾಗತ ಸಮಿತಿ:
ಈ ವೇಳೆ ಬೀದರಿನ ಹಿರಿಯರಾದ ಶಿವಶರಣಪ್ಪ ಪಾಟೀಲ ಇವರನ್ನು 19ನೇ ಕಲ್ಯಾಣ ಪರ್ವದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ದಾಸೋಹ ಸಮಿತಿಯ ಅಧ್ಯಕ್ಷರನ್ನಾಗಿ ಶರಣ ಶಿವರಾಜ ಪಾಟೀಲ ಅತಿವಾಳ ಅವರನ್ನು, ಪ್ರಧಾನ ಕಾರ್ಯದರ್ಶಿಯನ್ನಾಗಿ ಬಸವರಾಜ ಪಾಟೀಲ ಅವರನ್ನು ನೇಮಕ ಮಾಡಲಾಯಿತು.