ಬಸವಕಲ್ಯಾಣ (ಬೀದರ್): ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಸದ್ಗುರು ಚೆನ್ನಬಸವ ಶಿವಯೋಗಿಗಳ 69ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ಕೋವಿಡ್ ಕಾರಣದಿಂದ ಪ್ರತಿವರ್ಷ ಮೂರು ದಿನಗಳ ಕಾಲ ನಡೆಯುತ್ತಿದ್ದ ಜಾತ್ರಾ ಮಹೋತ್ಸವವನ್ನು ಈ ವರ್ಷ ಒಂದು ದಿನಕ್ಕೆ ಮೊಟಕುಗೊಳಿಸಲಾಯಿತು. ಸಂಜೆ ನಡೆಯಬೇಕಿದ್ದ ರಥೋತ್ಸವವನ್ನು ಬೆಳಗ್ಗೆಯೇ ನಡೆಸಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ನಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ರಥೋತ್ಸವಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ಶ್ರೀ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರ ರಥೋತ್ಸವದ ವೇಳೆಯೇ ರಥ ಬೀದಿಯಲ್ಲಿ ಶ್ರೀ ಚೆನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಮೆರವಣಿಗೆ ಜರುಗಿತು. ಡೊಳ್ಳು ತಂಡದವರಿಂದ ನಡೆದ ಪ್ರದರ್ಶನ ಗಮನ ಸೆಳೆಯಿತು.
ಮಂಠಾಳ ಗ್ರಾಮದ ಮುಖಂಡ ಜಗನ್ನಾಥ ಪಾಟೀಲ ಅವರ ಮನೆಯಿಂದ ಹೊತ್ತಿಸಿಕೊಂಡು ಬರಲಾದ ದೀಪದಿಂದ ರಥಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ, ಮಠದ ಪೀಠಾಧಿಪತಿಗಳಾದ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಜಿ.ಪಂ. ಅಧ್ಯಕ್ಷೆ ಸುವರ್ಣಾ ಮಲಾಜಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಮಂಠಾಳ ಸಿಪಿಐ ಮಹೇಶ್ ಗೌಡ ಪಾಟೀಲ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.