ಬಸವಕಲ್ಯಾಣ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ನಿರಂತರ ಹೋರಾಟ ನಡೆಸಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಸಂಜುಕುಮಾರ ಸಂಗನೋರೆ ಆರೋಪಿಸಿದರು.
ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಿಗ ಸಮಾಜದವರ ಸಂಖ್ಯೆ ಬಹಳಷ್ಟಿದೆ. ಸಮುದಾಯದವರು ಆರ್ಥಿಕ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಸರ್ಕಾರಿ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಆಯೋಗದ ವರದಿ ಜಾರಿಗೆ ತರುವ ಸಂಬಂಧ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನು ಕಡೆಗಣಿಸುತ್ತಿವೆ. ಪ್ರತಿ ಸಲ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸುಳ್ಳು ಆಶ್ವಾಸನೆ ನೀಡಿ, ನಮ್ಮಿಂದ ಓಟು ಪಡೆಯುತ್ತಿದ್ದಾರೆ. ಆದರೆ, ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಈ ಸಲ ಸಮಾಜದವರು ಸುಮ್ಮನಿರುವುದಿಲ್ಲ. ಕೆಲವೇ ದಿನಗಳಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಸಮುದಾಯವರ ಶಕ್ತಿ ಏನಿದೆ ಎಂಬುದನ್ನು ನಾವು ತೋರಿಸುತ್ತೇವೆ ಎಂದು ಎಚ್ಚರಿಸಿದರು.
ಓದಿ: ಬಿಜೆಪಿ ಸರ್ಕಾರ ಬಂದಿರುವುದೇ ಆಪರೇಷನ್ ಮೂಲಕ: ಹೆಚ್.ಕೆ.ಕುಮಾರಸ್ವಾಮಿ
ಸಂಘದ ಸಲಹೆಗಾರರಾದ ಶಿರೋಮಣಿ ನಿಲೂನೂರ ಮಾತನಾಡಿ, ಬೇರೆ ಸಮುದಾಯದವರ ಸಂಖ್ಯೆ ಕಡಿಮೆಯಿದ್ದರೂ ಅಂಥವರಿಗೆ ಸರ್ಕಾರ ಸೌಲಭ್ಯ ಮತ್ತು ಸೌಕರ್ಯ ನೀಡುತ್ತಿದೆ. ಆದರೂ ನಾವು ಸಹಿಸಿಕೊಂಡು ಬರುತ್ತಿದ್ದೇವೆ ಎಂದರು.
ನಗರಸಭೆ ಸದಸ್ಯ ಹಾಗೂ ಜಿಲ್ಲಾ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಕಾರ್ಯುದರ್ಶಿ ಮಾರುತಿ ಲಾಡೆ, ಖಜಾಂಚಿ ದತ್ತು ಲಾಡೆ, ಪ್ರಧಾನ ಕಾರ್ಯದರ್ಶಿ ನಿಲಕಂಠ ಭೆಂಡೆ, ಹುಲಸೂರ ತಾಲೂಕ್ ಅಧ್ಯಕ್ಷ ದಯಾನಂದ ಗವಾರೆ, ಧನಾಜಿ ಸೂರ್ಯಂಶಿ, ಯುವರಾಜ ನೀಲಕಂಠ, ಧರ್ಮಣ್ಣಾ ಭೇಂಡೆ, ತಾಲೂಕ ಯುವ ಅಧ್ಯಕ್ಷ ಅರ್ಜುನ ಸಂಗನೋರೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.