ಬೀದರ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಬೀದರ್-ಕಲಬುರಗಿ ನಡುವೆ ಅನಗತ್ಯ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ಹೊರ ವಲಯದಲ್ಲಿ ಕಲಬುರಗಿ ಹಾಗೂ ಬೀದರ್ ಜಿಲ್ಲಾ ಪೊಲೀಸರಿಂದ ಚೆಕ್ ಪೋಸ್ಟ್ಗಳಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳು ಹಾಗೂ ಜನರನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಲಾಗುತ್ತಿದೆ.
ಈಶಾನ್ಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಹೊರ ಜಿಲ್ಲೆಗಳಿಂದ ಬರುತ್ತಿರುವ ಪ್ರವಾಸಿಗರ ತಪಾಸಣೆ ಹಾಗೂ ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ನೀಡಿದ ಪಾಸ್ ಉಳ್ಳವರಿಗೆ ಮಾತ್ರ ಅಂತರ್ ಜಿಲ್ಲಾ ಪ್ರವಾಸಕ್ಕೆ ಅವಕಾಶ ನೀಡಲಾಗ್ತಿದೆ.
ಕಲಬುರಗಿಯತ್ತ ಪ್ರಯಾಣ ಮಾಡುವವರಿಗೆ ಸ್ಥಳೀಯ ಕಮಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲನೆ ಮಾಡಿ ಪ್ರವೇಶ ನೀಡುತ್ತಿದ್ದರೆ, ಇತ್ತ ಬೀದರ್ ಜಿಲ್ಲೆಗೆ ಆಗಮಿಸುವ ಜನರನ್ನು ಚಿಟಗುಪ್ಪಾ ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲಿಸಿ, ಮಾಹಿತಿ ಕಲೆಹಾಕಿ ಸ್ಥಳೀಯವಾಗಿ ಕ್ವಾರಂಟೈನ್ ಮಾಡಲು ಸೂಚಿಸಲಾಗುತ್ತಿದೆ.