ಬಸವಕಲ್ಯಾಣ (ಬೀದರ್): ತಾಲೂಕಿನ ಹಿರನಾಗಾಂವ ಹಾಗೂ ಖೇರ್ಡಾ (ಕೆ) ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಮಂಜೂರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮದ ಪ್ರಮುಖರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.
ದಿವಂಗತ ಶಾಸಕ ಬಿ.ನಾರಾಯಣರಾವ್ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದ ಎರಡು ಗ್ರಾಮಗಳ ಪ್ರಮುಖರ ನಿಯೋಗ, ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಈ ಎರಡೂ ಗ್ರಾಮಗಳಲ್ಲಿ ಪ್ರತ್ಯೇಕ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಮಂಜೂರು ಮಾಡಬೇಕು ಎಂಬ ಬೇಡಿಕೆಯಿದ್ದರೂ ಕೂಡ ಕಳೆದ ಐದು ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿಗಳ ಮರುವಿಂಗಡನೆ ವೇಳೆ ನಮ್ಮ ಗ್ರಾಮಗಳಿಗೆ ಅನ್ಯಾಯ ಮಾಡಲಾಗಿದೆ.
ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಗ್ರಾ.ಪಂ. ಕೇಂದ್ರಸ್ಥಾನ ಮಂಜೂರಿ ಒತ್ತಾಯಿಸಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಕಳೆದ ಗ್ರಾ.ಪಂ. ಚುನಾವಣೆಯಿಂದ ಹಿಡಿದು ಇದುವರೆಗೆ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸಲಾಗಿದೆ. ಆದರೂ ಇದುವರೆಗೆ ನಮ್ಮ ಮನವಿಗೆ ಯಾರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮುಂದಿನ ಒಂದೆರಡು ವರ್ಷಗಳಲ್ಲಿ ಈ ಬಿಜೆಪಿ ಪಕ್ಷದ ಸರ್ಕಾರ ತೊಲಗಿ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ತಕ್ಷಣ ನಿಮ್ಮ ಬೇಡಿಕೆಗೆ ಸ್ಪಂದಿಸಿ ಗ್ರಾ.ಪಂ. ಕೇಂದ್ರ ಸ್ಥಾನ ಮಂಜೂರಿಗೆ ಕ್ರಮ ಕೈಗೊಳ್ಳಲಾಗುವುದು ಗ್ರಾಮಸ್ಥರಿಗೆ ಭರವಸೆ ನೀಡಿದರು.