ಬಸವಕಲ್ಯಾಣ : ತಾಲೂಕಿನಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಅಧಿಕ ಮಳೆಯಿಂದ ಮುಸ್ತಾಪೂರ ಬಳಿ ಇರುವ ಚುಳಕಿ ನಾಲಾ ಜಲಾಶಯದ ನೀರಿನ ಗರಿಷ್ಠ ಮಟ್ಟ ತಪುಪಿದೆ. ಇನ್ನು ಒಳಹರಿವು ಹೆಚ್ಚುತ್ತಿರುವುದರಿಂದ ಜಲಾಶಯದ 6 ಗೇಟ್ಗಳ ಮೂಲಕ ನೀರು ಹರಿಬಿಡಿಲಾಗುತ್ತಿದೆ.
ಚುಳಕಿ ನಾಲಾ ಜಲಾಶಯದ ಗರಿಷ್ಠ ಮಟ್ಟ 592 ಮೀ. ಇದ್ದು, 0.938 ಟಿಎಂಸಿ ಸಾಮರ್ಥ್ಯವಿದೆ. ಜಲಾಶಯಕ್ಕೆ 5500 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆ ಬುಧವಾರ ಬೆಳಗ್ಗಯಿಂದಲೇ ಒಳಹರಿವು ಹೆಚ್ಚುತಿದ್ದು, ಸಂಜೆ ವೇಳೆಗೆ ಜಲಾಶಯದಿಂದ 10 ಸಾವಿರ ಕ್ಯೂಸೆಕ್ನಷ್ಟು ನೀರು ಹೊರ ಬಿಡಲಾಗುತ್ತಿದೆ. ಮತಷ್ಟು ಹೆಚ್ಚಿನ ಮಳೆಯಾಗುವ ಭೀತಿ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಒಳ ಹರಿವು ಪ್ರಮಾಣಕ್ಕಿಂತ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ ಎಂದು ರಾಜ್ಯ ನೀರಾವರಿ ನಿಗಮದ ಚುಳಕಿ ನಾಲಾ ಯೋಜನೆ ಭಾಲ್ಕಿ ವಿಭಾಗ -2 ಇಇ ವಿಲಾಸ್ಕುಮಾರ್ ಮಾಶೆಟ್ಟೆ ತಿಳಿಸಿದ್ದಾರೆ.
ಒಳ ಹರಿವು ಹೆಚ್ಚಾದರೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತದೆ. ಹೀಗಾಗಿ ಜಲಾಶಯ ಪಾತ್ರದ ನಾಲಾ ತೀರದಲ್ಲಿರುವ ಗ್ರಾಮಸ್ಥರು ಎಚ್ಚರ ವಹಿಸಬೇಕು. ಜನ, ಜಾನುವಾರುಗಳು ಈ ವೇಳೆಯಲ್ಲಿ ನಾಲಾ ತೀರದತ್ತ ಬಿಡಬಾರದು. ಸಾರ್ವಜನಿಕರು ನಾಲಾದಲ್ಲಿ ಇಳಿದು ಈಜಾಡುವುದು, ಬಟ್ಟೆ ಒಗೆಯುವುದು, ದನಗಳಿಗೆ ನೀರು ಕುಡಿಸುವುದು ಮಾಡಬಾರದು. ಯಾವುದೇ ಕಾರಣಕ್ಕೂ ನಾಲಾದಲ್ಲಿ ಇಳಿಯಬಾರದು ಎಂದು ಕೋರಿದ್ದಾರೆ.
ಮುಲ್ಲಾಮಾರಿ:
ತಾಲೂಕಿನ ಖೇರ್ಡಾ(ಬಿ) ಸಮಿಪದ ಮುಲ್ಲಾಮಾರಿ ಮೇಲ್ದಂಡೆ ಯೋಜನೆ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದ್ದು, ಇದೇ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.