ಬೀದರ್: ಕೊರೊನಾ ವೈರಸ್ ನಿಯಂತ್ರಣಕ್ಕೆ ಜಾರಿಯಲ್ಲಿರುವ ಮೂರನೇ ಹಂತದ ಲಾಕ್ಡೌನ್ಗೆ ಗಡಿಜಿಲ್ಲೆ ಬೀದರ್ನಲ್ಲಿ ಜನರ ಬೆಂಬಲ ಉತ್ತಮವಾಗಿದೆ.
ಪರಿಷ್ಕೃತ ನಿಷೇಧಾಜ್ಞೆಯಲ್ಲಿ ಸ್ವಲ್ಪ ಸಡಿಲಿಕೆ ನೀಡಲಾಗಿದ್ದು, ಜನರು ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾರೆ. ಮದ್ಯದಂಗಡಿ ಮುಂದೆ ಮದ್ಯಪ್ರಿಯರ ಸರತಿ ಸಾಲು ಬಿಟ್ಟರೆ ಮಾರುಕಟ್ಟೆಯಲ್ಲಿ ಅನಗತ್ಯ ಸಂಚಾರ ಕಾಣಲಿಲ್ಲ. ನಗರದ ಅಂಬೇಡ್ಕರ್ ವೃತ್ತ, ನಯಾಕಮಾನ್, ಬೊಂಬಗೊಂಡೇಶ್ವರ ವೃತ್ತ ಹಾಗೂ ಮೈಲೂರು ಕ್ರಾಸ್ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಜಿಲ್ಲಾಡಳಿತ ನಿಷೇಧಾಜ್ಞೆಯಲ್ಲಿ ಸಡಿಲ ಮಾಡಿ ವ್ಯಾಪಾರ ಮಾಡಲು ಅವಕಾಶ ನೀಡಿದ್ರೂ ಬಹುತೇಕ ವ್ಯಾಪಾರಿಗಳು ಕೊರೊನಾ ಭೀತಿಯಿಂದ ಅಂಗಡಿ ತೆರೆಯಲಿಲ್ಲ. ಅಲ್ಲಲ್ಲಿ ವಾಹನ ಸಂಚಾರ, ಅಗತ್ಯ ವಸ್ತುಗಳ ಖರೀದಿಗೆ ಜನರ ಓಡಾಟ ಬಿಟ್ಟರೆ ಸುಮ್ಮನೆ ರಸ್ತೆಯಲ್ಲಿ ಸಂಚರಿಸಿರುವುದು ಕಂಡು ಬಂದಿಲ್ಲ.
ದೆಹಲಿಯ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಬಂದವರಿಂದ ಬೀದರ್ ನಗರಕ್ಕೆ ವಕ್ಕರಿಸಿಕೊಂಡ ಕೊರೊನಾ ವೈರಸ್ನಿಂದ ಇಂದು ಮತ್ತೆ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 26 ಜನರಲ್ಲಿ ಸೋಂಕು ಖಚಿತವಾಗಿದೆ. ಈ ಪೈಕಿ 14 ಜನರು ಗುಣಮುಖರಾಗಿದ್ದು, ಒಬ್ಬ ವ್ಯಕ್ತಿಯ ಸಾವಿನ ನಂತರ ಆತನಲ್ಲಿ ಕೊರೊನಾ ವೈರಾಣು ಇರುವುದು ಪತ್ತೆಯಾಗಿದೆ. ಹೀಗಾಗಿ ಇನ್ನೂ 11 ಜನರಿಗೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಹೀಗೆ ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ಸೋಂಕು ಪತ್ತೆಯಾದ್ದರಿಂದ ಜನರು ಮನೆಯಿಂದ ಹೊರ ಬರ್ತಿಲ್ಲ. ಎಷ್ಟೇ ಕಷ್ಟವಾದ್ರೂ ಮೇ 17 ವರೆಗೆ ಹಾಕಲಾದ ಲಾಕ್ಡೌನ್ 3.0 ನಿಯಮವನ್ನು ನಗರ ನಿವಾಸಿಗರು ಪಾಲಿಸುತ್ತಿರುವುದು ಕಂಡು ಬಂದಿದೆ.