ಬೀದರ್: ಮಹಾರಾಷ್ಟ್ರದ ಧನೇಗಾಂವ್ ಜಲಾಶಯದಿಂದ ಹೆಚ್ಚುವರಿಯಾಗಿ 80 ಸಾವಿರ ಕ್ಯೂಸೆಕ್ ನೀರನ್ನು ಮಾಂಜ್ರಾ ನದಿಗೆ ಹರಿಬಿಟ್ಟ ಹಿನ್ನೆಲೆ ರೈತರ ಬೆಳೆಗೆ ನೀರು ನುಗಿದ್ದು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಜಿಲ್ಲೆಯ ಕಮಲನಗರ ತಾಲೂಕಿನ ಸೋನಾಳ ಗ್ರಾಮದ ರೈತರ ಸೋಯಾಬೀನ್ ಬೆಳೆಗೆ ನೀರು ನುಗ್ಗಿದೆ. ಜಲಾವೃತವಾದ ಬೆಳೆ ಮಧ್ಯೆ ನಿಂತು ರೈತನೋರ್ವ ಮರಾಠಿ ಭಾಷೆಯಲ್ಲಿ ಸಾಲ ಮಾಡಿಕೊಂಡ ರೈತ ಬದುಕುವುದು ಹೇಗೆ ಎಂದು ಹಾಡು ಹಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ನೋವು ತೋಡಿಕೊಂಡಿದ್ದಾರೆ.
ಇನ್ನು ಭಾಲ್ಕಿ ತಾಲೂಕಿನ ಲಖನಗಾಂವ್ ಹೋಬಳಿ ವ್ಯಾಪ್ತಿಯ ಸೋಮಪುರ ಗ್ರಾಮದ ಉತ್ತಮ ಬಿರಾದರ ಎಂಬ ರೈತನ ಎಂಟು ಎಕರೆ ಸೋಯಾಬೀನ್ ಬೆಳೆ ಸಹ ನೀರು ಪಾಲಾಗಿದೆ.
ಬೆಳೆಗೆ ಪರಿಹಾರ ನೀಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೊಬ್ಬರು ಸ್ಪಂದಿಸುತ್ತಿಲ್ಲ. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಹಾರ ನೀಡಬೇಕು ಎಂದು ರೈತ ಮನವಿ ಮಾಡಿಕೊಂಡಿದ್ದಾರೆ.