ಬೀದರ್: ಕೇಳಿದ್ದು ಕೊಟ್ಟಿಲ್ಲ, ಕೊಟ್ಟಿದ್ದು ಎದ್ದಿಲ್ಲ, ಸಕಾಲಕ್ಕೆ ಭರಪೂರ ಮಳೆಯಾದರೂ ಅನ್ನದಾತನ ಸಂಕಷ್ಟಕ್ಕೆ ಪಾರವೇ ಇಲ್ಲ. ಬರಗಾಲದಿಂದ ಕಷ್ಟ ಅನುಭವಿಸಿದ ರೈತನಿಗೆ ಅತಿವೃಷ್ಟಿ ಆಪತ್ತು ತಂದಿಟ್ಟಿತ್ತು. ಈಗ ಸರ್ಕಾರವೇ ವಿತರಣೆ ಮಾಡಿದ ಸೋಯಾಬಿನ್ ಬೀಜ ಬಿತ್ತನೆ ಮಾಡಿದ ಅನ್ನದಾತರ ಗದ್ದೆಗಳಲ್ಲಿ ಮೊಳೆಕೆ ಒಡೆದಿಲ್ಲ. ಮತ್ತೊಂದು ಬಾರಿ ಬಿತ್ತನೆ ಮಾಡಿದ್ರೂ ಅದು ಸಾರ್ಥಕವಾಗೊಲ್ಲ. ಹೀಗಾಗಿ ಈ ವರ್ಷ ಮಳೆಯಾದ್ರೂ ಅನ್ನದಾತನ ಪಾಲಿಗೆ ಸಂಕಷ್ಟ ತಪ್ಪಿದ್ದಲ್ಲ.
ಸಕಾಲಕ್ಕೆ ಸಾಕಷ್ಟು ಮಳೆಯಾದ್ರೂ ಸರ್ಕಾರವೇ ಸರಬರಾಜು ಮಾಡಿದ ಬಿತ್ತನೆ ಬೀಜಗಳು ಮೊಳಕೆಯೊಡೆಯದ ಕಾರಣ ಅನ್ನದಾತರು ಅಸಹಾಯಕರಾಗಿದ್ದಾರೆ. ಜಿಲ್ಲೆಯ ಕಮಲನಗರ, ಔರಾದ್ ಹಾಗೂ ಭಾಲ್ಕಿ ತಾಲೂಕಿನಾದ್ಯಂತ ಬಹುತೇಕ ರೈತರು ಈ ಸಂಕಷ್ಟ ಅನುಭವಿಸುತ್ತಿದ್ಧಾರೆ.
ಸಕಾಲಕ್ಕೆ ಸಾಕಷ್ಡು ಮಳೆಯಾಗಿದೆ. ಉದ್ದು, ಹೆಸರು, ಜೋಳ, ತೊಗರಿ, ಅವರೇ ಸೇರಿದಂತೆ ಮುಂಗಾರು ಬೆಳೆಗಳು ಹಚ್ಚ ಹಸಿರಿನಿಂದ ಮೊಳಕೆ ಒಡೆದಿವೆ. ಆದರೆ ಕೃಷಿ ಇಲಾಖೆ ಸರಬರಾಜು ಮಾಡಿದ ಅಧಿಕೃತ ಕಂಪನಿಗಳ ಸೋಯಾಬಿನ್ ಬೀಜ ಮೊಳಕೆ ಒಡೆಯದ್ದಕ್ಕೆ ರೈತರು ಕಂಗಾಲಾಗಿ ಹೋಗಿದ್ದಾರೆ.
ಸಾಲ ಮಾಡಿ ಬೀಜ, ರಸಗೊಬ್ಬರ, ಬಿತ್ತನೆ ಮಾಡಲು ಟ್ರ್ಯಾಕ್ಟರ್ಗೆ ಬಾಡಿಗೆ ಹೀಗೆ ಒಂದು ಎಕರೆ ಜಮೀನಿನಲ್ಲಿ 5,000 ರೂಪಾಯಿ ಖರ್ಚು ಮಾಡಲಾಗಿದೆ. ಬಿತ್ತನೆ ಮಾಡಿ 15 ದಿನಗಳಾದರೂ ಸೋಯಾಬಿನ್ ಮೊಳಕೆ ಕಾಣ್ತಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.
ಕೃಷಿ ಇಲಾಖೆಯಿಂದ ಮೊದಲ ಹಂತದಲ್ಲಿ ಸಿದ್ದಾರ್ಥ ಎಂಬ ಕಂಪನಿ ಹೆಸರಿನ ಸರ್ಫೀಫೈಡ್ ಬೀಜ ವಿತರಣೆ ಮಾಡಲಾಗಿದೆ. ಅಧಿಕಾರಿಗಳು ಬೇರೆ ಕಂಪನಿ ಬೀಜಗಳು ಕಳಪೆ ಇವೆ ಸಿದ್ದಾರ್ಥ ಸೀಡ್ಸ್ ಸಮಸ್ಯೆ ಇಲ್ಲ ಎಂದು ರೈತರಿಗೆ ಸಲಹೆ ನೀಡಿ ಬಿತ್ತನೆ ಮಾಡಲು ಹೇಳಿದ್ದಾರೆ. ಅದರಂತೆ ಸಾವಿರಾರು ರೈತರು ವಾಣಿಜ್ಯ ಬೆಳೆ ಸೋಯಾಬಿನ್ ಬಿತ್ತನೆ ಮಾಡಿದ್ದಾರೆ.
ಆದರೆ, ಈಗ ಈ ಬೀಜಗಳು ಕೂಡ ಮೊಳಕೆ ಒಡೆಯದೇ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದು, ಈಗ ಮತ್ತೊಮ್ಮೆ ಬಿತ್ತನೆ ಮಾಡಿದ್ರೆ ಮೊದಲ ಹಂತದಲ್ಲಿ ಮಾಡಿದ ಸಾಲ ಮತ್ತು ಎರಡನೆ ಹಂತದಲ್ಲಿ ಬಿತ್ತನೆ ಮಾಡಲಾಗುವ ಡಬಲ್ ಸಾಲ ಮಾಡಿಕೊಂಡು ಇಳುವರಿ ಎಷ್ಟೇ ಬಂದರೂ ಸಾಲ ತೀರಿಸಲು ಸಾಧ್ಯವೇ ಇಲ್ಲ. ಸರ್ಕಾರವೇ ನಮ್ಮ ನಷ್ಟಕ್ಕೆ ಕಾರಣವಾಗಿದ್ದು, ಸೂಕ್ತ ಪರಿಹಾರ ನೀಡಲೇಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತ ಸಮುದಾಯ ಕಣ್ಣಿರು ಹಾಕುತ್ತಿದ್ದು, ಸಂಕಷ್ಟದಲ್ಲಿರುವ ರೈತರ ನೋವು ಅರ್ಥ ಮಾಡಿಕೊಂಡು ಸರ್ಕಾರ ಈ ಭಾಗದಲ್ಲಾದ ರೈತರ ನಷ್ಟದ ಸಮಗ್ರ ವರದಿ ಸಿದ್ದಪಡಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಮುದಾಯ ಆಗ್ರಹಿಸಿದೆ.