ಬೀದರ್: ಉಚಿತ ನೀರು ಕೋಡ್ತಿನಿ ಅಂತ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಿರಾ ಎಂದು ತುಂಬಿದ ಸಭೆಯಲ್ಲೇ ರೈತನೋರ್ವ ಮಾಡಿದ ಆರೋಪಕ್ಕೆ ಸಚಿವ ರಹೀಂ ಖಾನ್ ಕಕ್ಕಾಬಿಕ್ಕಿಯಾದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತನೋರ್ವ ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಸಮ್ಮುಖದಲ್ಲೇ ಸಚಿವ ರಹೀಂ ಖಾನ್ ಮುಖದಲ್ಲಿ ನೀರಿಳಿಯುವಂತೆ ಮಾಡಿದರು. ಜನರಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಕೊಡಿಸುತ್ತಿದ್ದೇನೆಂದು ಫೋಟೊಗಳನ್ನು ಟ್ಯಾಂಕರ್ಗಳ ಮೇಲೆ ಅಂಟಿಸಿಕೊಂಡು ಪ್ರಚಾರ ಪಡೆದುಕೊಂಡಿದ್ದೀರಿ. ಕಾರಂಜಾ ಜಲಾಶಯದ ನೀರು ತೆಗೆದುಕೊಳ್ಳುತ್ತೀರಿ. ನಮಗೆ ಪರಿಹಾರ ಕೊಡಲಿಕ್ಕೆ ಆಗೋದಿಲ್ಲವಾ ಎಂದು ರೈತ ಕಿಡಿಕಾರಿದ್ದಾರೆ.
'ರೀ ಸಚಿವರೇ ಸರ್ಕಾರದಿಂದ ಟ್ಯಾಂಕರ್ ನೀರು ಸರಬರಾಜು ಹೆಸರಿನಲ್ಲಿ ಹಣ ಪಡೆದು. ಉಚಿತ ನೀರು ಕುಡಿಸುತ್ತಿದ್ದೇನೆಂದು ಪ್ರಚಾರ ಪಡೆಯುತ್ತಿರುವುದು ಯಾವ ನ್ಯಾಯಾ ರೀ. ನಗರಸಭೆಯಿಂದ ಕೋಟಿ ಕೋಟಿ ರೂಪಾಯಿ ಹಣ ಪಡೆದು ಉಚಿತವಾಗಿ ನೀರು ಕೊಡಿಸುತ್ತಿದ್ದೇನೆಂದು ಹೇಳುವುದು ಎಷ್ಟು ಸರಿ ಸಚಿವರೇ'..? ಎಂದು ರೈತ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು.
ಇದೇ ತಿಂಗಳಾಂತ್ಯದಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಾರಂಜಾ ಸಂತ್ರಸ್ತರ ಮನವೊಲಿಸಲು ನಡೆದ ಸಭೆಯಲ್ಲಿ ರೈತ ಈ ಗಂಭೀರ ಆರೋಪ ಮಾಡಿದ್ದಾರೆ.