ಬೀದರ್: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ ಬೀದರ್ ತಾಲೂಕಿನ ಜನವಾಡ ಗ್ರಾಮದ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಊರ ತುಂಬಾ ನೀರಿದ್ದರೂ ಜನ ನೀರಿಗಾಗಿ ಕೈಯಲ್ಲಿ ಬಿಂದಿಗೆ ಹಿಡಕೊಂಡು ರಸ್ತೆಗೆ ಬರೋದು ತಪ್ತಿಲ್ಲ.
ಬೀದರ್-ನಾಂದೇಡ ಹೆದ್ದಾರಿಯಲ್ಲಿರುವ ಸುಮಾರು 10 ಸಾವಿರ ಜನ ವಸತಿಯಿರುವ ಜನವಾಡ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಜಲಕ್ಷಾಮ ಉಲ್ಬಣಗೊಂಡಿದೆ. ಬೇಸಿಗೆ, ಚಳಿಗಾಲ, ಮಳೆಗಾಳದಲ್ಲೂ ನೀರಿಗಾಗಿ ಹಾಹಾಕಾರವಿದೆ.
ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ. ಅಂತರದಲ್ಲಿರುವ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯತ್ ನಿರ್ವಹಣೆ ಲೋಪದಿಂದ ಗ್ರಾಮಸ್ಥರು ನೀರಿಗಾಗಿ ಅಲೆದಾಡುತ್ತಿದ್ದಾರೆ. ಒಂದು ಬಿಂದಿಗೆ ನೀರು ತುಂಬಿಕೊಳ್ಳಲು ಹೆದ್ದಾರಿ ಪಕ್ಕದ ನಲ್ಲಿ ನೀರಿಗೆ ಮುಗಿ ಬೀಳ್ತಿದ್ದಾರೆ.
ಮಹಿಳೆಯರು, ಮಕ್ಕಳು, ವಯೋವೃದ್ಧರು ಬೆಳಿಗ್ಗೆಯಿಂದ ಸಂಜೆಯವರೆಗೆ ನೀರಿಗಾಗಿ ಹೆದ್ದಾರಿ ಪಕ್ಕದಲ್ಲಿ ಬಿಂದಿಗೆಗಳನ್ನು ಸರತಿ ಸಾಲಿನಲ್ಲಿಟ್ಟು ಹರಸಾಹಸಪಟ್ಟು ನೀರು ಸಂಗ್ರಹಿಸುತ್ತಿದ್ದಾರೆ. ಸ್ಥಳೀಯವಾಗಿ ಜಲಮೂಲ ಇಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿತ ಕಂಡಿದ್ದರಿಂದ ಮಳೆಗಾಲದಲ್ಲೂ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದೇವೆ ಅಂತಾರೆ ಸ್ಥಳೀಯ ಮಹಿಳೆಯರು.
ಸದ್ಯ ಬಳಕೆ ನೀರು ಸೇರಿದಂತೆ ಕುಡಿಯುವ ನೀರನ್ನು ಶ್ರೀಮಂತರು ಟ್ಯಾಂಕರ್ ಮೂಲಕ ಖರೀದಿಸ್ತಿದ್ದಾರೆ. ಈಗ ಬಟ್ಟೆ ತೊಳೆಯಲು ಹಳ್ಳದ ನೀರು ಸಿಗ್ತಿದೆ. ಆದ್ರೆ ಕುಡಿಯುವ ನೀರಿಗೆ ದಿಕ್ಕು ಕಾಣದಂತಾಗಿ ರಡು ಕಿ.ಮೀ. ದೂರದ ಕೌಠಾ, ಚಾಂಬೋಳ ಗ್ರಾಮಗಳಿಂದ ನೀರು ತಂದು ಜೀವನ ಮಾಡ್ತಿದ್ದಾರೆ. ಕೊರೊನಾ ಸೋಂಕು ಹರಡುವ ಭೀತಿ ಮರೆತು ನೀರಿಗಾಗಿ ನಿತ್ಯ ಜನರು ನಳದ ಮುಂದೆ ಜಗಳವಾಡ್ತಿದ್ದಾರೆ. ನಮ್ಮ ನೋವಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ಯಾರೇ ಎನ್ನುತ್ತಿಲ್ಲ ಎಂದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ನಾಗಮ್ಮ ಗುಮ್ಮ ಆರೋಪಿಸಿದ್ದಾರೆ.