ಬೀದರ್: ಮಹಾರಾಷ್ಟ್ರ, ತೆಲಂಗಾಣ ರಾಜ್ಯದಿಂದ ಆಗಮಿಸುವವರ ಮೇಲೆ ನಿಯಂತ್ರಣ ಹೇರಲು ಸ್ಥಾಪಿಸಲಾದ ಗಡಿ ಚೆಕ್ ಪೋಸ್ಟ್ಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗಡಿ ಚೆಕ್ ಪೋಸ್ಟ್ಗಳ ವ್ಯವಸ್ಥೆ ನೋಡಲು ದಿಢೀರ್ ಭೇಟಿ ನೀಡಬೇಕು. ಅಲ್ಲದೆ, ನೆರೆ ರಾಜ್ಯದಿಂದ ಬರುವವರ ದಾಖಲೆ ಸಂಗ್ರಹಣೆ ಜೊತೆಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬರುವವರ ಗಂಟಲು ದ್ರವದ ಪರೀಕ್ಷೆ ನೋಂದಣಿ ಕೂಡ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲು ಮತ್ತೊಂದು ಹೊಸ ಯಂತ್ರ ಖರೀದಿ ಮಾಡಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸುವುದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಹೀಗಾಗಿ ಬ್ರೀಮ್ಸ್ ಆಸ್ಪತ್ರೆಯ ಪ್ರಯೋಗಾಲಯದ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಪ್ರಯೋಗಾಲಯದ ಸಿಬ್ಬಂದಿ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.