ಬಸವಕಲ್ಯಾಣ: ಹಣದ ಆಸೆಗಾಗಿ ಗೆಳೆಯನನ್ನು ಕೊಲೆ ಮಾಡಿದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ಮುರುಮ್ ಗ್ರಾಮದ ನಿವಾಸಿ ಬಸವರಾಜ ನಾಗಯ್ಯ ಸ್ವಾಮಿ ಶಿಕ್ಷೆಗೆ ಗುರಿಯಾದ ಅಪರಾಧಿ.
ಮುರುಮ್ ಗ್ರಾಮದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದ ಉಸ್ಮಾನಾಬಾದ್ ಮೂಲದ ವಿಜಯಕುಮಾರ ಧಾರೂರಕರ್ ಎನ್ನುವ ವ್ಯಕ್ತಿಯನ್ನು 2013 ನವೆಂಬರ್ 15ರಂದು ತಾಲೂಕಿನ ಮಂಠಾಳ ಗ್ರಾಮದ ಬಳಿ ಬಸವರಾಜ ನಾಗಯ್ಯ ಸ್ವಾಮಿ ಕೊಲೆ ಮಾಡಿದ್ದ.
ಪ್ರಕರಣದ ಹಿನ್ನೆಲೆ: ಕೊಲೆಯಾದ ವಿಜಯಕುಮಾರ ಧಾರೂರಕರ್ ಹಾಗೂ ಬಸವರಾಜ ಇಬ್ಬರು ಸ್ನೇಹಿತರಾಗಿದ್ದರು. 2013 ನವೆಂಬರ್ 15 ರಂದು ಸಂಜೆ ಉಮರ್ಗಾ ಚೌರಸ್ತಾ ಬಳಿ ಆಕಸ್ಮಿಕ ಭೇಟಿಯಾಗಿದ್ದು, ನಂತರ ಇಬ್ಬರು ಕೂಡಿ ಡಾಬಾ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ಇದೇ ವೇಳೆ ಅಪರಾಧಿ ಬಸವರಾಜ ಕೊಲೆಯಾದ ವಿಜಯಕುಮಾರನ ಬಳಿ 5 ಸಾವಿರ ರೂ. ಹಣ ಸಾಲ ಕೇಳಿದ್ದ, ಹೀಗಾಗಿ ಹಣ ನೀಡಲೆಂದು ವಿಜಯಕುಮಾರ ಬಸವರಾಜನೊಂದಿಗೆ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿ 5 ಸಾವಿರ ರೂ. ನೀಡಿದ್ದ. ಹಣ ಡ್ರಾ ಮಾಡುವಾಗ ಎಟಿಎಂ ಪಿನ್ ಸಂಖ್ಯೆ ಗಮನಿಸಿದ ಅಪರಾಧಿ ಬಸವರಾಜ, ನಂತರ ವಿಜಯಕುಮಾರನನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕ್ ಮೇಲೆ ಮಂಠಾಳ ಕಡೆಗೆ ಕರೆದುಕೊಂಡು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವದ ಮೇಲಿನ ಸಂಪೂರ್ಣ ಬಟ್ಟೆ ಹಾಗೂ ಎಟಿಎಂ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಆರೋಪಿ ನಾಪತ್ತೆಯಾಗಿದ್ದ.
ನಂತರ ಮೂರು ದಿಗಳ ಕಾಲ ಮಹಾರಾಷ್ಟ್ರದ ಉಮರ್ಗಾ ಹಾಗೂ ಪೂನಾ ನಗರದ ವಿವಿಧ ಎಟಿಎಂಗಳಲ್ಲಿ 80 ಸಾವಿರಕ್ಕೂ ಅಧಿಕ ಹಣ ಡ್ರಾ ಮಾಡಿಕೊಂಡಿದ್ದ. ಕೊಲೆಯಾದ ನಾಲ್ಕು ದಿನಗಳ ನಂತರ ಶವ ಪತ್ತೆಯಾಗಿದ್ದನ್ನು ಗಮನಿಸಿದ ಮಂಠಾಳ ಪೊಲೀಸರ ತಂಡ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಪರಾಧಿ ಪತ್ತೆಗೆ ಜಾಲ ಬೀಸಿತ್ತು. ಅಂದಿನ ಮಂಠಾಳ ಸಿಪಿಐ(ಈಗ ಡಿವೈಎಸ್ಪಿ) ಶಿವನಗೌಡ ಪಾಟೀಲ ನೇತೃತ್ವದ ತಂಡ, ತನಿಖೆ ನಡೆಸಿ, ಮಹಾರಾಷ್ಟ್ರದ ವಿವಿಧ ಎಟಿಎಂಗಳಲ್ಲಿ ದಾಖಲಾಗಿದ್ದ ಸಿಸಿಟಿವಿ ದೃಶ್ಯದ ಆಧಾರದ ಮೇಲೆ, ಅಪರಾಧಿಯನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು.