ಬಸವಕಲ್ಯಾಣ: ಸಕಾಲಕ್ಕೆ ಮಳೆ ಇಲ್ಲದೆ ಕೂಲಿ ಕಾರ್ಮಿಕರ ಸಮಸ್ಯೆ ಸಹಿಸಿಕೊಂಡು ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರುವ ಸಮಯದಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡಿ ಬೆಳೆ ನಾಶ ಮಾಡುತ್ತಿರುವುದರಿಂದ ರೈತರ ಬದುಕು ಅತಂತ್ರವಾಗುತ್ತಿದೆ. ಇತ್ತ ಲಾಕ್ಡೌನ್ನಿಂದಾಗಿ ಬೆಳೆದ ಬೆಳೆಗೂ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ.
ಹುಲಸೂರು ಸಮಿಪದ ಭಾಲ್ಕಿಯ ರೈತ ಬಾಬುರಾವ್ ಚಾಂಗಲೂರೆ ಎಂಬುವರಿಗೆ ಸೇರಿದ ಜಮೀನಿಗೆ ದಾಳಿ ನಡೆಸಿದ ಕಾಡು ಹಂದಿಗಳು, 20 ಗುಂಟೆಯಲ್ಲಿ ಬೆಳೆದ ಕಬ್ಬು ಮತ್ತು ಮೆಕ್ಕೆಜೋಳವನ್ನು ನಾಶಪಡಿಸಿವೆ.
ಬಸವಕಲ್ಯಾಣ ಮತ್ತು ಹುಲಸೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಮಂಠಾಳ, ಕೋಹಿನೂರು ದೇವನಾಳ, ಮಾಚನಾಳ, ಹಾಲಹಳ್ಳಿ, ತೋಗಲೂರ, ಮೇಹಕರ ಗ್ರಾಮಗಳ ಜಮೀನುಗಳಲ್ಲೂ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಬೆಳೆಗಳನ್ನು ನಾಶಪಡಿಸಿ, ರೈತರನ್ನು ಚಿಂತೆಗೀಡು ಮಾಡುತ್ತಿವೆ.
ನೀರಾವರಿ ಇರೋ ಹೊಲ ಗದ್ದೆಗಳಲ್ಲಿ ಕಾಡು ಹಂದಿಗಳು ಹಿಂಡು ಹಿಂಡಾಗಿ ವಾಸಿಸುತ್ತಿವೆ. ಬೆಳಗ್ಗೆ ಕಾಣಿಸಿಕೊಳ್ಳದ ಹಂದಿಗಳು ರಾತ್ರಿ ಆಗುತಿದ್ದಂತೆ ಪ್ರತ್ಯಕ್ಷವಾಗುತ್ತವೆ. ರೈತರು ಬೆಳೆದ ಕಬ್ಬು, ಮೆಕ್ಕೆಜೋಳ, ತರಕಾರಿ ಸೇರಿದಂತೆ ಹಲವು ಬೆಳೆಗಳು ಹಂದಿಗಳ ದಾಳಿಗೆ ನಾಶವಾಗುತ್ತಿವೆ. ಕಾಡುಪ್ರಾಣಿಗಳ ಹಾವಳಿಯಿಂದ ನಮಗೆ ಮುಕ್ತಿ ದೊರಕಿಸಿಕೊಡಿ ಎಂದು ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.