ಬೀದರ್ : ಕೇಂದ್ರ ಸರ್ಕಾರದ ವೈಫಲ್ಯಗಳು ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕಪ್ಪು ಹಣ ವಾಪಾಸ್ ತರುವುದು, ಆರ್ಸಿಇಪಿ ಒಪ್ಪಂದ, ಉದ್ಯೋಗ ಸೃಷ್ಟಿಸುವ ಬಗ್ಗೆ ನೀಡಿದ ಭರವಸೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಆಶ್ವಾಸನೆ ನೀಡಿದ್ದರು. ಆದರೆ ಈ ಎಲ್ಲಾ ಭರವಸೆಗಳು ಈಡೇರಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಜಮ್ಮು ಕಾಶ್ಮೀರದ 370ವಿಧಿ ರದ್ದು ಪಡಿಸಿದ್ದು, ತ್ರಿಪಲ್ ತಲಾಕ್ ರದ್ದು ಪಡಿಸಿದ್ದು, ಸೇರಿದಂತೆ ಅನೇಕ ಜನ ವಿರೋಧಿ ನೀತಿಗಳನ್ನು ಜಾರಿಗೆ ತುರುವ ಮೂಲಕ ಜನರು ಸಮಸ್ಯೆ ಎದುರಿಸುವಂತೆ ಮಾಡಿದ್ದಾರೆ. ಜಿಡಿಪಿ ಶೇ. 6ಕ್ಕೆ ಇಳಿದಿದೆ. ಇದರಿಂದ ಆರ್ಥಿಕ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರಿ ಸಾವಿರಾರು ಜನ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುವಂತಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.