ಬೀದರ್: ಶಾಸಕರ ಸಂವಿಧಾನ ಬದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ಅವರು ಹಕ್ಕು ಚ್ಯುತಿ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಅಧ್ಯಕ್ಷರಿಗೆ ದೂರು ಸಲ್ಲಿಸಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಭಾಲ್ಕಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ವಸತಿ ಯೋಜನೆ ಅಡಿ ಅವ್ಯವಹಾರದಲ್ಲಿ ಶಾಸಕರ ಸಂವಿಧಾನ ಬದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅನಗತ್ಯವಾಗಿ ನೋಟಿಸ್ ನೀಡುವ ಮೂಲಕ ತೇಜೋವಧೆ ಮಾಡಿದ ಹಿನ್ನೆಲೆಯಲ್ಲಿ ಶಾಸಕರ ಹಕ್ಕು ಚ್ಯುತಿಯಾಗಿರುವುದಕ್ಕೆ ಸ್ಪೀಕರ್, ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕ್ರಮ ಕೈಗೊಳ್ಳುವಂತೆ ದೂರಲಾಗಿದೆ ಎಂದರು.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸದಸ್ಯನಾದ ನಾನು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಹಲವು ಅಕ್ರಮ, ಅವ್ಯವಹಾರಗಳ ಕುರಿತು ಮಾಹಿತಿ ಕೇಳಿದ್ದೇನೆ. ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಭೂ ಪರಿವರ್ತನೆ ಮಾಫಿಯಾ ನಡೆಯುತ್ತಿದೆ. ಮಧ್ಯವರ್ತಿಗಳು ಸೇರಿಕೊಂಡು ಸಾರ್ವಜನಿಕರಿಂದ ಹಣ ಲೂಟಿ ಮಾಡ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಅದೆಲ್ಲವೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕೊವಿಡ್-19 ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಉಪಕರಣಗಳನ್ನು ದುಬಾರಿ ಬೆಲೆಗೆ ನೀಡಿದ್ದಾರೆ ಎಂಬ ಸಾರ್ವಜನಿಕರ ಆರೋಪವಿದೆ. ಅದನ್ನು ಕೂಡ ತನಿಖೆ ನಡೆಸಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಅಕ್ರಮಗಳ ಸಮರ್ಪಕ ಮಾಹಿತಿ ನೀಡದೇ ಅಕ್ರಮಗಳಲ್ಲಿ ಭಾಗಿಯಾದ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಈ ವೇಳೆ, ಶಾಸಕ ರಾಜಶೇಖರ್ ಪಾಟೀಲ್, ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.