ಬೀದರ್: ಮದುವೆ ಮನೆಯಲ್ಲಿ ವೇದಿಕೆ ಮೇಲೆ ವಧು ವರ ಇಬ್ಬರೂ ರೆಡಿಯಾಗಿದ್ದರು. ಮಂಟಪದ ತುಂಬ ನೂರಾರು ಜನ ನೆಂಟರಿಸ್ಥರು ಸೇರಿದ್ದರು. ಇನ್ನೇನು ಕೊರಳಿಗೆ ಮಾಂಗಲ್ಯ ಕಟ್ಟಿ ಹಸೆ ಮಣೆ ಏರಬೇಕಾದ ವರನಿಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
ಹೌದು ಜಿಲ್ಲೆಯ ಭಾಲ್ಕಿ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ಪಟ್ಟಣದ ನೀಲಕಂಠ ಎಂಬ ಯುವಕನ ಜೊತೆಯಲ್ಲಿ ಸ್ಥಳೀಯ ಬಾಲಕಿಯೊಬ್ಬಳ ಮದುವೆ ಸಮಾರಂಭ ನಡೆಯುತ್ತಿತ್ತು. ಬಾಲಕಿಗೆ 12ನೇ ವಯಸ್ಸಿಗೇ ಪೋಷಕರು ಮದುವೆ ಮಾಡಿಸುತ್ತಿರುವ ಮಾಹಿತಿ ಪಡೆದ ಶಿಶು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶರಣಬಸಪ್ಪ ಅವರ ಅಧಿಕಾರಿಗಳ ತಂಡ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟು ಜರುಗುತ್ತಿದ್ದ ಬಾಲ್ಯ ವಿವಾಹವೊಂದನ್ನು ತಡೆದಿದ್ದಾರೆ.
ಅಧಿಕಾರಿಗಳು ಹೀಗೆ ದಿಢೀರ್ ಮದುವೆ ನಿಲ್ಲಿಸಿದಕ್ಕೆ ಕಕ್ಕಾಬಿಕ್ಕಿಯಾದ ಎರಡು ಮನೆಯ ಕುಟುಂಬಸ್ಥರು ಜಮಾಯಿಸಿದ ನೆಂಟರಿಸ್ಥರು ಅಧಿಕಾರಿಗಳ ಜತೆಯಲ್ಲಿ ವಾದಕ್ಕಿಳಿದು ಕೆಲ ಕಾಲ ಮಾತಿನ ಚಕಮಕಿ ನಡೆದಿದೆ.
ಈ ನಡುವೆ ಬಾಲಕಿಯ ಶಾಲಾ ದಾಖಲೆ ಪರಿಶೀಲನೆ ಮಾಡಿದಾಗ ಮದುವೆಗೆ ಸಿದ್ದವಾದ ಬಾಲಕಿಗೆ ಬರೀ 12 ವರ್ಷ ವಯಸ್ಸಾಗಿದ್ದು, ಇದು ಕಾನೂನು ಬಾಹಿರ ಹೀಗೆ ಮದುವೆಯಾದರೆ ಶಿಕ್ಷಾರ್ಹ ಅಪರಾಧವಾಗುತ್ತೆ ಎಂದು ಅಧಿಕಾರಿಗಳು ಎರಡು ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ನಂತರ ಅಧಿಕಾರಿಗಳ ಮಾತು ಅರಿತು ಮದುವೆ ಮನೆಯಲ್ಲಿ ನಡೆಯಬೇಕಾದ ಮದುವೆ ನಿಲ್ಲಿಸಿ ಹುಡುಗಿಗೆ 18 ವರ್ಷ ವಯಸ್ಸಾದ ಮೇಲೆ ಮದುವೆ ಮಾಡುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.