ಔರಾದ್(ಬೀದರ್): ಜಿಲ್ಲೆಯ ಔರಾದ್ ಪಟ್ಟಣ ಸೇರಿದಂತೆ ವಿವಿಧೆಡೆ ವಾಣಿಜ್ಯ ಬೆಳೆಯಾದ ಸೋಯಾಬಿನ್ ಬೆಳೆಯಲಾಗುತ್ತದೆ. ಬೀಜ ವಿತರಣೆಯಲ್ಲಿ ಕೃಷಿ ಇಲಾಖೆ ಮಾಡಿಕೊಂಡ ಗೊಂದಲದಿಂದ ರೈತರು ಮುಂಗಾರು ಹಂಗಾಮಿನ ಬಿತ್ತನೆ ಮಾಡಲಾಗದೆ ಕಂಗಾಲಾಗಿದ್ದಾರೆ. ಬೀಜಕ್ಕಾಗಿ ಅಲೆದಾಡುತ್ತಿದ್ದರೂ ಯಾವೊಬ್ಬ ಸಂಬಂಧಪಟ್ಟ ಅಧಿಕಾರಿಗಳು ಇವರತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮಧ್ಯಪ್ರದೇಶ ಹಾಗೂ ತೆಲಂಗಾಣದಿಂದ ಸರಬರಾಜಾಗುವ ಸೋಯಾಬಿನ್ ಬೀಜ ಮೊಳಕೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿ ರೈತರಿಗೆ 2 ವಾರಗಳಿಂದ ಬೀಜ ನೀಡುತ್ತಿಲ್ಲ. ಸಾಕಷ್ಟು ದಾಸ್ತಾನು ಇದೆ. ಹೀಗಾಗಿ ನಮಗೆ ಬೀಜ ನೀಡಿ, ಅದನ್ನೇ ಬಿತ್ತನೆ ಮಾಡುತ್ತೇವೆ. ಮೊಳಕೆ ಒಡೆಯುತ್ತೋ ಬಿಡುತ್ತೋ ನಮ್ಮ ಕರ್ಮ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೆಲವೊಂದು ಹಳ್ಳಿಗಳಲ್ಲಿ ಈಗಾಗಲೇ ಸೋಯಾಬಿನ್ ಬೀಜ ವಿತರಣೆ ಮಾಡಲಾಗಿದೆ. ಕೆಲ ರೈತರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಚೆನ್ನಾಗಿ ಮೊಳಕೆ ಒಡೆದಿವೆ. ಬೀಜಗಳಲ್ಲಿ ಯಾವುದೇ ತೊಂದರೆ ಇಲ್ಲ. ಆದ್ರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಬೀಜ ವಿತರಣೆ ಮಾಡಬೇಡಿ ಎಂದು ಹೇಳಿದ್ದಾರೆ. ಅವರು ವಿತರಣೆ ಮಾಡಿ ಎಂದು ಆದೇಶ ನೀಡಿದ್ರೆ ಮಾತ್ರ ಬೀಜ ವಿತರಣೆ ಮಾಡುತ್ತೇವೆ ಅಂತಾರೆ ಕೃಷಿ ಅಧಿಕಾರಿ ಭೀಮರಾವ್ ಶಿಂಧೆ.
ಒಟ್ಟಾರೆ ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನುವಂತಾಗಿದೆ ಬೀದರ್ ರೈತರ ಪರಿಸ್ಥಿತಿ. ಸರ್ಕಾರ ಸಬ್ಸಿಡಿ ದರದಲ್ಲಿ ಸೋಯಾಬಿನ್ ಬೀಜ ವಿತರಣೆಗೆ ಅವಕಾಶ ನೀಡಿದರೂ ಕೃಷಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.