ಬೀದರ್: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜನವಸತಿ ಇರುವ ತಗ್ಗು ಪ್ರದೇಶಗಳು ಜಲಾವೃತವಾಗಿ ಸಂಕಷ್ಟದಲ್ಲಿರುವ ಕಮಲನಗರ ಪಟ್ಟಣದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸಂಚರಿಸಿ ಸಂಕಷ್ಟದಲ್ಲಿರುವ ಜನರಿಗಾಗಿ ಪರಿಹಾರ ಕೇಂದ್ರ ಸ್ಥಾಪನೆ ಮಾಡಲು ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯ ಭಾಲ್ಕಿ, ಕಮಲನಗರ, ಔರಾದ್ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರ ಮಾಡಿದೆ. ಕಮಲನಗರ ಪಟ್ಟಣದ ಹಿಮ್ಮತನಗರ, ರೈಲ್ವೆ ಸ್ಟೇಷನ್ ಹಾಗೂ ಬಸ್ ಸ್ಟ್ಯಾಂಡ್ ಪ್ರದೇಶದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ 25ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಅಲ್ಲದೆ ಬಸ್ ನಿಲ್ದಾಣದ ಎದುರಿನ ಅಂಗಡಿಗಳಲ್ಲಿ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಆಸ್ತಿ ಹಾನಿಯಾಗಿದ್ದು, ಹಲವರು ಬೀದಿಗೆ ಬಂದಿದ್ದರು. ಈ ಕುರಿತು 'ಈಟಿವಿ ಭಾರತ' ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು.
ಇಂದು ಬೆಳಗ್ಗೆಯಿಂದಲೇ ಫೀಲ್ಡಿಗೆ ಇಳಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮಳೆಯಿಂದ ಹಾನಿಯಾದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ವಾರದ ಗಡುವು ನೀಡಿದ್ದಾರೆ.
ಸ್ಥಳೀಯ ಸಂಘ-ಸಂಸ್ಥೆಗಳ ಸಲಹೆ ಸ್ವೀಕರಿಸಿ ತಕ್ಷಣ ಪರಿಹಾರ ಕೇಂದ್ರ ಆರಂಭಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಮಲನಗರ ಪಟ್ಟಣದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಸುಮಾರು 50ಕ್ಕೂ ಅಧಿಕ ಜನರಿಗೆ ಆಸರೆಯಾಗಿದೆ ಎನ್ನಲಾಗಿದೆ.
ಅಲ್ಲದೆ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಮಾಂಜ್ರಾ ನದಿಯ ತಟದಲ್ಲಿರುವ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಲಾಗಿದ್ದು, ನೆರೆ ಸಂದರ್ಭ ಎದುರಿಸಲು ಅಧಿಕಾರಿಗಳ ತಂಡ ಸಕ್ರಿಯವಾಗಿರಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.