ಬೀದರ್: ನಿನ್ನೆ ಮತ್ತು ಇಂದು ಸಂಜೆ ಜಿಲ್ಲೆಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಸ್ಟಾರ್ ಏರ್ ವಿಮಾನ ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು ಮಧ್ಯಾಹ್ನವೇ ನಿಲ್ದಾಣದಲ್ಲಿ ಬಂದು ಕುಳಿತಿದ್ದರು. ಸಂಜೆ 4.30 ಆದರೂ ವಿಮಾನ ಬರಲಿಲ್ಲ. ಬಳಿಕ ವಿಮಾನ ಸಂಚಾರ ರದ್ದುಗೊಳಿಸಿರುವುದಾಗಿ ದಿಢೀರ್ ಪ್ರಕಟಿಸಲಾಗಿದೆ. ಅಲ್ಲದೇ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಯ ಬಗ್ಗೆ ಯಾವುದೇ ಸೂಚನೆಯನ್ನೂ ನೀಡಿರಲಿಲ್ಲ.
ಕಂಪನಿ ಅಧಿಕಾರಿಗಳಿಗೆ ಕರೆ ಮಾಡಿದರೂ ಉತ್ತರ ದೊರೆಯದ ಕಾರಣ ಕೆಲವರು ಅನಿವಾರ್ಯವಾಗಿ ಮನೆಗೆ ತೆರಳಿದರು. ಇನ್ನೂ ಕೆಲವರು ರೈಲು ಮತ್ತು ಬಸ್ ಮುಖಾಂತರ ಬೆಂಗಳೂರಿನತ್ತ ಪ್ರಯಾಣಿಸಿದರು. ಸೋಮವಾರ ಬೆಂಗಳೂರಿನಿಂದ ಬೀದರ್ಗೆ 30 ಹಾಗೂ ಬೀದರ್ನಿಂದ ಬೆಂಗಳೂರಿಗೆ 40 ಟಿಕೆಟ್ ಬುಕ್ ಆಗಿದ್ದವು.
ಈ ತಿಂಗಳಲ್ಲಿ ಇದು ಮೂರನೇ ಬಾರಿಗೆ ವಿಮಾನ ರದ್ದಾಗಿದೆ. ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಕೆಲ ತಿಂಗಳಿನಿಂದ ಐದಾರು ಸಲ ಇಂಥದ್ದೇ ಸಮಸ್ಯೆ ಎದುರಿಸಿದ್ದಾರೆ. ಅಲ್ಲದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ವಿಮಾನ ಸಂಚಾರವನ್ನು ಗುರುವಾರದವರೆಗೆ ರದ್ದುಗೊಳಿಸಲಾಗಿದೆ. ಶುಕ್ರವಾರದಿಂದ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೆಐಎಎಲ್ ಇಮಿಗ್ರೇಷನ್ಗೆ ಉದ್ದನೆಯ ಕ್ಯೂ: ಬೇಸರ ವ್ಯಕ್ತಪಡಿಸಿದ ಪ್ರಯಾಣಿಕರು