ಬೀದರ್: ನೀರಿನ ಸಮಸ್ಯೆ ಪರಿಶೀಲನೆಗೆ ಬಂದ ಅಧಿಕಾರಿಯೊಬ್ಬರು ನೆರಳಿಗಾಗಿ ಕಾರು ಚಾಲಕನಿಂದ ಛತ್ರಿ ಹಿಡಿಸಿಕೊಂಡಿರುವ ಘಟನೆ ನಡೆದಿದೆ. ಅಧಿಕಾರಿಯ ನಡೆ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ಜನರು ಪರಿತಪಿಸುತ್ತಿದ್ದರು. ಈ ಕುರಿತು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ಅವರು ಪಟ್ಟಣದ ಬಸವನಗುಡಿ ಬಾವಿ ಬಳಿ ಆಗಮಿಸಿದ್ದರು. ಆಗ ಜನರು ಬಿಸಿಲಿನಲ್ಲಿ ಬಾವಿಯಿಂದ ಕಷ್ಟಪಟ್ಟು ಒಂದೊಂದೇ ಬಿಂದಿಗೆ ನೀರು ತೆಗೆಯುತ್ತಿದ್ದರು. ಈ ವೇಳೆ ಆಯುಕ್ತರಿಗೆ ನೆರಳಾಗಲು ಕಾರು ಚಾಲಕ ಛತ್ರಿ ಹಿಡಿದುಕೊಂಡಿದ್ದರು. ಬಾವಿ ಮೇಲೆ ಆಯುಕ್ತರು ಪರಿಶೀಲನೆ ನಡೆಸುತ್ತಿರುವಾಗ ಕೂಡ ವಾಹನ ಚಾಲಕ ಕೊಡೆ ಹಿಡಿದುಕೊಂಡು, ಆಯುಕ್ತರಿಗೆ ನೆರಳು ನೀಡಲು ಹರಸಾಹಸ ಪಡುತ್ತಿದ್ದರು.
ಈ ದೃಶ್ಯ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ಆಯುಕ್ತರು ಬಳಿಕ ಚಾಲಕನ ಕೈಯಿಂದ ಛತ್ರಿ ತೆಗೆದುಕೊಂಡು ಜನರೊಂದಿಗೆ ಬಿಸಿಲಲ್ಲಿ ಹೊರಟರು. ಸಂಕಷ್ಟದಲ್ಲಿರುವ ಪ್ರಜೆಗಳ ಮುಂದೆ ಸೌಜನ್ಯಕ್ಕಾದ್ರು ಸರಳವಾಗಿರಬೇಕಿತ್ತು ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ, ನನಗೆ ಚರ್ಮರೋಗದ ಸಮಸ್ಯೆ ಇದೆ, ಹೀಗಾಗಿ ಸಿಬ್ಬಂದಿ ಕೊಡೆ ಹಿಡಿದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.