ಔರಾದ್/ಬಸವಕಲ್ಯಾಣ (ಬೀದರ್): ಜಿಲ್ಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಮಾಸ್ಕ್ ಡೇ ಆಚರಿಸಲಾಯಿತು.
ಔರಾದ್ನ ಪುರಸಭೆ ಆವರಣದಲ್ಲಿ ಸಹಾಯಕ ಆಯುಕ್ತ ಅಕ್ಷಯ ಶ್ರೀಧರ್ ಜಾಥಾಗೆ ಚಾಲನೆ ನೀಡಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವಾಗ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖದ ಮೇಲೆ ಮಾಸ್ಕ್ ಧರಿಸಲೇಬೇಕು. ಇದು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರಾಮಬಾಣವಾಗಿದೆ ಎಂದರು.
ನಂತರ ಪುರಸಭೆಯಿಂದ ಬಸವೇಶ್ವರ ವೃತ್ತದ ಮೂಲಕ ಕನ್ನಡಾಂಬೆ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಿದ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಮಾಸ್ಕ್ ಧರಿಸುವಂತೆ ಘೋಷಣೆ ಕೂಗಿದರು.
ಈ ವೇಳೆಯಲ್ಲಿ ತಹಶಿಲ್ದಾರ್ ಚಂದ್ರಶೇಖರ್, ಮಖ್ಯಾಧಿಕಾರಿ ಚಾಂದ ಪಟೇಲ್, ಸಹಾಯಕ ಎಂಜಿನಿಯರ್ ಪ್ರೀತಿ ಹಕ್ಯಾಳೆ, ಬಾಲರಾಜ ಭಾಲ್ಕೆ, ಪುರಸಭೆ ಸದಸ್ಯರಾದ ದಯಾನಂದ ಘೂಳೆ, ಇಮಾನುವೆಲ್ ದರಬಾರೆ, ಯಾದವರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಸವಕಲ್ಯಾಣದಲ್ಲೂ ಜಾಗೃತಿ ಜಾಥಾ:
ಮಾಸ್ಕ್ ಡೇ ನಿಮಿತ್ತ ತಾಲೂಕಾಡಳಿತದಿಂದ ಬಸವಕಲ್ಯಾಣದಲ್ಲೂ ಬೃಹತ್ ಜಾಥಾ ನಡೆಸಿ ಜನಜಾಗೃತಿ ಮೂಡಿಸಲಾಯಿತು. ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ತ್ರಿಪುರಾಂತ ಪ್ರವಾಸಿ ಮಂದಿರದವರೆಗೆ ಪಾದಯಾತ್ರೆ ಮೂಲಕ ಬೃಹತ್ ಜಾಥಾ ನಡೆಸಲಾಯಿತು.
ತಾಲೂಕು ಪಂಚಾಯತಿ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ, ತಹಶಿಲ್ದಾರ್ ಸಾವಿತ್ರಿ ಸಲಗರ, ಪೌರಾಯುಕ್ತೆ ಮೀನಾಕುಮಾರಿ ಬೋರಾಳ್ಕರ್, ತಾಪಂ ಇಓ ಮಡೋಳಪ್ಪ ಪಿ.ಎಸ್. ಇತರರು ಭಾಗಿಯಾಗಿದ್ದರು.