ಬಸವಕಲ್ಯಾಣ: ಉಪಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆ ನಡೆಸುವುದು ಸೇರಿದಂತೆ ಸಮಾಜದಲ್ಲಿ ವಿನಾ ಕಾರಣ ಅಶಾಂತಿ ಸೃಷ್ಟಿಸಲು ಮುಂದಾದಲ್ಲಿ ಗಡಿಪಾರು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ರೌಡಿಶೀಟರ್‌ಗಳಿಗೆ ಹುಮನಾಬಾದ್ ಡಿವೈಎಸ್ಪಿ ಸೋಮಲಿಂಗಪ್ಪ ಕುಂಬಾರ್ ಎಚ್ಚರಿಸಿದ್ದಾರೆ.
ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಸಿಪಿಐ ಕಚೇರಿಯಲ್ಲಿ ಭಾನುವಾರ ರೌಡಿಶೀಟರ್‌ಗಳ ಪರೇಡ್ ನಡೆಸಿದ ನಂತರ ಮಾತನಾಡಿದ ಅವರು, ಹಳೇ ಘಟನೆಗಳನ್ನು ಮರೆತು ಸಮಾಜದಲ್ಲಿ ಎಲ್ಲರಂತೆ ಬದುಕು ನಡೆಸುವುದನ್ನು ಕಲಿತುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಉಪಚುನಾವಣೆ ಹಿನ್ನೆಲೆ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೌಡಿಶೀಟರ್‌ನಲ್ಲಿ ಹೆಸರಿರುವ ವ್ಯಕ್ತಿಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದೆ ಕಾನೂನಿಗೆ ಗೌರವಿಸಿ ಸುಮ್ಮನಿರಬೇಕು. ಸನ್ನಡತೆ ತೋರುವ ವ್ಯಕ್ತಿಗಳಿಗೆ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ನಾಳೆ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ, ಟಿಕಾಯತ್ ಭಾಗಿ
ಮಂಠಾಳ ಪೊಲೀಸ್ ವೃತ್ತದ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಠಾಣೆಯಲ್ಲಿ 162, ಮುಡಬಿ ಠಾಣೆಯಲ್ಲಿ 30 ಮತ್ತು ಮಂಠಾಳ ಠಾಣೆ ವ್ಯಾಪ್ತಿಯ 37, ಹುಲಸೂರ ಠಾಣೆಯ 48, ನಗರ ಠಾಣೆಯ 100ಕ್ಕೂ ಅಧಿಕ ರೌಡಿಶೀಟರ್‌ಗಳು ಇದ್ದು, ಈ ಪೈಕಿ ಒಟ್ಟು 129 ಜನ ರೌಡಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು. ಉಳಿದ ರೌಡಿಶೀಟರ್‌ಗಳು ನಾನಾ ಕಾರಣಗಳಿಂದಾಗಿ ಸ್ಥಳೀಯವಾಗಿ ಲಭ್ಯವಿಲ್ಲದ ಕಾರಣ ಅವರಿಗೆ ಮತ್ತೊಂದು ದಿನ ನಿಗದಿಪಡಿಸಿ ಪರೇಡ್ ನಡೆಸಲಾಗುವುದು ಎಂದು ತಿಳಿಸಿದರು.