ಬೀದರ್ : ಜಿಲ್ಲೆಯ ಔರಾದ್ ತಾಲೂಕಿನ ಸುಂದಾಳ ಗ್ರಾಮದಲ್ಲಿ ಕೊರೊನಾ ನಡುವೆಯೂ ಸರಳ ವಿವಾಹ ಜರುಗಿದೆ. ಸಂದೀಪ ಎಂಬ ವರನ ಜೊತೆ ಅದೇ ಗ್ರಾಮದ ಪೂಜಾ ಎಂಬ ಯುವತಿಯ ಸಪ್ತಪದಿ ತುಳಿದಿದ್ದು, ಮಾಸ್ಕ್ ಧರಿಸಿ ಕೇವಲ 30 ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.
ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸಾಮಾನ್ಯವಾಗಿ ಮದುವೆ ಸಮಾರಂಭವಾದರೆ ಸಾವಿರಾರು ಜನರಿಗೆ ಊಟ, ಗೌರವ ಸನ್ಮಾನ, ಸೇರಿದಂತೆ ನೆಂಟರಿಗೆ ಬಟ್ಟೆ, ಊರ ದೇವರಿಗೆ ಪೂಜೆ ನಡೆಯುತ್ತಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳ ವಿವಾಹವಾಗಿದ್ದಾರೆ.
ಇನ್ನು ಮದುವೆಯಲ್ಲಿ ವಧು ಮತ್ತು ವರನ ಹತ್ತಿರದ 30 ಸಂಬಂಧಿಕರು ಮಾತ್ರ ಭಾಗಿಯಾಗಿದ್ದರು. ಇವರು ಕೂಡ ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸುರಕ್ಷಿತವಾಗಿ ಮದುವೆಯನ್ನು ಮುಗಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜನರು ಕೂಡ ಕೊರೊನಾ ಬಗ್ಗೆ ಜಾಗೃತರಾಗಿದ್ದಾರೆ ಎಂಬುದಕ್ಕೆ ಈ ಮದುವೆ ಸಮಾರಂಭವೇ ಸಾಕ್ಷಿಯಾಗಿದೆ.