ಬೀದರ್: ನಾಲ್ವರು ಗೆಳೆಯರೊಂದಿಗೆ ಗ್ರಾಮದ ಹೊರವಲಯದಲ್ಲಿನ ಹೊಂಡದಲ್ಲಿ ಈಜಾಡಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದ ಕ್ರೀಟನ್ ಸಂಜುಕುಮಾರ್ (12) ಎಂಬಾತನೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕ ಎನ್ನಲಾಗಿದೆ. ಮಧ್ಯಾಹ್ನದ ವೇಳೆ ಗೆಳೆಯರೊಂದಿಗೆ ಈಜಾಡಲು ಗ್ರಾಮದ ಹೊರವಲಯದಲ್ಲಿರುವ ನೀರಿನ ಹೊಂಡಕ್ಕೆ ಹೋಗಿದ್ದಾನೆ. ಈ ವೇಳೆ ಅತಿ ಆಳದ ನೀರಿನಲ್ಲಿ ಮುಳುಗಿ ಬಾಲಕ ನೀರುಪಾಲಾಗ್ತಿದ್ದಂತೆ ಜತೆಯಲ್ಲಿದ್ದ ಗೆಳೆಯರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಅಷ್ಟೊತ್ತಿಗಾಗಲೇ ಬಾಲಕ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ನಂತರ ಸ್ಥಳೀಯರು ಬಾಲಕನ ಮೃತದೇಹ ಹೊರಗೆ ತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಕುರಿತು ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.