ಬೀದರ್: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೆ 6 ಮಂದಿ ಬಲಿಯಾಗಿದ್ದು, ಹೊಸದಾಗಿ 51 ಜನರಲ್ಲಿ ಸೋಂಕು ದೃಢಪಟ್ಟಿದೆ.
ನಗರದ ಪಕಲವಾಡ ಸುಭಾಷ ಚೌಕ್ ಬಳಿಯ 65 ವರ್ಷದ ವ್ಯಕ್ತಿ ಜೂನ್ 26ರಂದು ಸಾವನ್ನಪ್ಪಿದ್ದಾರೆ. ಹುಮನಾಬಾದ್ ಪಟ್ಟಣದ ಶಿವಪೂರ ಗಲ್ಲಿಯ 70 ವರ್ಷದ ಮಹಿಳೆ ಶುಗರ್, ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಜೂನ್ 30ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿ, ಜುಲೈ 2ರಂದು ಸಾವನ್ನಪ್ಪಿದ್ದಾರೆ. ಓಲ್ಡ್ ಸಿಟಿಯ ಸಿಂಗಾರ ಬಾಗ್ ಬಡಾವಣೆಯ 70 ವರ್ಷದ ಮಹಿಳೆಯು ಜ್ವರ, ಹೃದಯ ರೋಗ, ರಕ್ತದೊತ್ತಡ ಸಮಸ್ಯೆಯಿಂದ ಜೂನ್ 30ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ 2ರಂದು ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ನಗರದ ಧರ್ಮಪ್ರಕಾಶ ಗಲ್ಲಿಯ 24 ವರ್ಷದ ಯುವತಿ ಬೆನ್ನುಮೂಳೆ ಸಮಸ್ಯೆ, ನೆಗಡಿ, ಜ್ವರದಿಂದ ಜೂನ್ 21ರಂದು ಬಸವಕಲ್ಯಾಣ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಲಾತೂರ ನಗರಕ್ಕೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.
ಭಾಲ್ಕಿ ತಾಲೂಕಿನ ಶಮಶಾಪೂರ್ ವಾಡಿ ಗ್ರಾಮದ 30 ವರ್ಷದ ಪುರುಷ ಜ್ವರ, ನೆಗಡಿಯಿದ್ದ ಕಾರಣ ಜೂನ್ 27ರಂದು ಗಂಟಲು ಮಾದರಿ ದ್ರವ ನೀಡಿದ್ದರು. ಆದರೆ ಜುಲೈ 1ರಂದು ಭಾಲ್ಕಿ ಪಟ್ಟಣದ ಬಸ್ ಡಿಪೋ ಹತ್ತಿರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಭಾಲ್ಕಿ ಪಟ್ಟಣದ ಕುರುಬುರ ಗಲ್ಲಿ ಬಡಾವಣೆಯ 50 ವರ್ಷದ ವ್ಯಕ್ತಿ ಜ್ವರದಿಂದ ಬಳಲಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಈ ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದಾಗ ಮೃತಪಟ್ಟ ಎಲ್ಲರಲ್ಲೂ ಕೊವಿಡ್-19 ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿಂದು 51 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 698ಕ್ಕೆ ಏರಿಕೆಯಾಗಿದೆ. ಕೊವಿಡ್-19ಗೆ ಬಲಿಯಾದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.