ಬಸವಕಲ್ಯಾಣ(ಬೀದರ್): ಬಡವರು ಹಸಿವಿನಿಂದ ಬಳಲಬಾರದು ಎಂದು ರಾಜ್ಯಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ, ಈ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಲು ಅನ್ಯರಾಜ್ಯಕ್ಕೆ ಹೊರಟಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಸವಕಲ್ಯಾಣ ನಗರದ ಅಡತ್ ಬಜಾರ್ನಲ್ಲಿ ಕಾಳಸಂತೆಯಲ್ಲಿ ಮಾರಲು ಲಾರಿಯಲ್ಲಿ ಪಡಿತರ ಅಕ್ಕಿ ತುಂಬಿಸಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಅಕ್ಕಿ ತುಂಬಿದ ಲಾರಿ ಸಹಿತ 10.80 ಲಕ್ಷ ರೂ. ಮೌಲ್ಯದ 39 ಟನ್ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಂ.ಡಿ.ಅದನಾನ ಆಸೀಫ್ ಹಾಜಿ, ಭಾಲ್ಕಿ ತಾಲೂಕಿನ ಗೋರಚಿಂಚೋಳಿ ಗ್ರಾಮದ ರತ್ನದೀಪ ಮೋರೆ, ಕಲಬುರಗಿಯ ಚಿಂಚೋಳಿ ತಾಲೂಕಿನ ಬೆಂಕಿಪಳ್ಳಿ ಗ್ರಾಮದ ಬಸವರಾಜ ಹಳಕೆ ಎನ್ನುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆಹಾರ ಇಲಾಖೆ ಆಹಾರ ನಿರೀಕ್ಷಕ ರಾಮರತನ್ ದೇಗಲೆ, ರಾಜೇಂದ್ರ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಾಳಸಂತೆಯಲ್ಲಿ ಮಾರಾಟ ಮಾಡಲೆಂದು ನಗರದಿಂದ ಮಹಾರಾಷ್ಟ್ರಕ್ಕೆ ಅಕ್ಕಿ ಸಾಗಿಸಲಾಗುತಿತ್ತು ಎನ್ನಲಾಗಿದೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.