ಬೀದರ್: ಒಡಿಸ್ಸಾ, ವೈಜಾಕ್, ವಿಜಯವಾಡದ ಮೂಲಕ ರಾಜ್ಯದ ಗಡಿ ಭಾಗದಿಂದ ಅಂತಾರಾಜ್ಯ ಗಾಂಜಾ ಸಾಗಾಟ ಜಾಲದ ಹೆಡೆಮುರಿ ಕಟ್ಟಿದ ಜಿಲ್ಲಾ ಪೊಲೀಸರು, ಕಳೆದ ಎರಡು ವರ್ಷಗಳಲ್ಲಿ ಸತತ ದಾಳಿ ನಡೆಸುವ ಮೂಲಕ 26 ಜನ ಡ್ರಗ್ಸ್ ಪೆಡ್ಲರ್ಗಳನ್ನ ಬಂಧನ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಒಡಿಸ್ಸಾ ರಾಜ್ಯದಿಂದ ತೆಲಂಗಾಣ ಮೂಲಕ ರಾಜ್ಯದ ಗಡಿ ಭಾಗದಲ್ಲಿ ಗಾಂಜಾ ಸಂಗ್ರಹಿಸಿ, ನಂತರ ಅದನ್ನು ಬೇರೆಡೆ ಸಾಗಾಟ ಮಾಡುವ ದಂಧೆ ಹಲವು ವರ್ಷಗಳಿಂದ ನಡೆಯುತ್ತಿತ್ತು. 2019ರಲ್ಲಿ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಪೊಲೀಸ್ ಠಾಣೆ ಹಾಗೂ ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ಪ್ರಕರಣಗಳಲ್ಲಿ 16 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 1,145 ಕೆಜಿ ಗಾಂಜಾ ಜಪ್ತಿ ಮಾಡಲಾಗಿತ್ತು. ಅಲ್ಲದೆ 2020ರಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಸಂತಪೂರ್, ಹಳ್ಳಿಖೇಡ, ಭಾಲ್ಕಿ ಹಾಗೂ ಹುಮನಾಬಾದ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾಳಿಗಳಲ್ಲಿ 417 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದು, 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಲಾಕ್ಡೌನ್ ವೇಳೆಯಲ್ಲೂ ಅಕ್ರಮ ಗಾಂಜಾ ದಂಧೆಕೋರರ ಮೇಲೆ ನಿಗಾ ವಹಿಸಿದ್ದ ಪೊಲೀಸ್ ಇಲಾಖೆ 9 ದಾಳಿ ಮಾಡಿದೆ. ಇದರಿಂದ ಗಡಿ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲೂ ಅಪಾಯಕಾರಿ ಗಾಂಜಾ ದಂಧೆಕೋರರ ಹೆಡೆಮುರಿ ಕಟ್ಟಲು ಜಿಲ್ಲಾ ಪೊಲೀಸ್ ಸಜ್ಜುಗೊಂಡಿದೆ ಎಂದು ಎಸ್.ಪಿ ನಾಗೇಶ್ ಹೇಳಿದ್ದಾರೆ.