ಬಳ್ಳಾರಿ : ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ನಾಗತಿಕಟ್ಟೆ ತಾಂಡಾದಲ್ಲಿ ನಡೆದಿದೆ.
ನಾಗತಿಕಟ್ಟೆ ತಾಂಡಾದ ಯುವಕರು ಹೆಣ್ಣು-ಗಂಡು ಕಪ್ಪೆಗಳನ್ನು ತಂದು ಸಿಂಗಾರ ಮಾಡಿ ಮದುವೆ ಮಾಡಿದ್ದಾರೆ. ಬೇವಿನ ಮರದ ಸೊಪ್ಪಿನ ಉಡುಗೆ ತೊಟ್ಟ ಇಬ್ಬರು ಬಾಲಕರು ಕಪ್ಪೆಗಳನ್ನು ಕೋಲಿನ ಎರಡು ಬದಿಯಲ್ಲಿ ಕಟ್ಟಿಕೊಂಡು ಬಾರೋ ಬಾರೋ ಮಳೆರಾಯ.. ಬಾಳೆಯ ತೋಟಕ್ಕೆ ನೀರಿಲ್ಲ.. ಎಂದು ಹಾಡುತ್ತಾ ಗ್ರಾಮದ ಮನೆ ಮನೆಗೆ ತೆರಳಿ ವಿಶೇಷ ಗಮನ ಸೆಳೆದರು.
ಮನೆ ಮುಂದೆ ಬಂದ ನವ ವಿವಾಹಿತ ಕಪ್ಪೆಗಳಿಗೆ ಗ್ರಾಮಸ್ಥರು ನೀರು ಹಾಕಿ ವಿಶೇಷ ಪೂಜೆ ಸಲ್ಲಿಸಿ ಯುವಕರ ತಂಡಕ್ಕೆ ದೇಣಿಗೆ ರೂಪದಲ್ಲಿ ಹಣ,ಆಹಾರ ಪದಾರ್ಥಗಳನ್ನು ನೀಡಿದರು. ನಾಗತಿಕಟ್ಟೆ ತಾಂಡಾದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿದ ಬಳಿಕ ಕಪ್ಪೆಗಳನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು.