ಹೊಸಪೇಟೆ : ಯೋಗ ಗುರು ಬಾಬಾ ರಾಮ್ದೇವ್ ಸಹಕಾರದಲ್ಲಿ ಫೆ.5 ರಿಂದ 7ರವರೆಗೆ ಪತಂಜಲಿ ಯೋಗ ಪೀಠ ಹರಿದ್ವಾರ ಮತ್ತು ಎಂಎಸ್ಪಿಎಲ್ ಸಂಸ್ಥೆ ಜಂಟಿಯಾಗಿ ನಗರದಲ್ಲಿ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ ಹಮ್ಮಿಕೊಂಡಿದೆ ಎಂದು ಪತಂಜಲಿ ಯೋಗಪೀಠದ ಉತ್ತರ ಕರ್ನಾಟಕ ಮಹಿಳಾ ರಾಜ್ಯ ಸಹ ಪ್ರಭಾರಿ ದಾಕ್ಷಾಯಣಿ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಶಿಬಿರದಲ್ಲಿ ಪ್ರತಿದಿನ ಬೆಳಿಗ್ಗೆ 5ರಿಂದ 7.30 ರವರೆಗೆ ಯೋಗಭ್ಯಾಸ ನಡೆಯುತ್ತದೆ. ಫೆಬ್ರವರಿ 5 ರಂದು ಸಂಜೆ 4 ರಿಂದ 6 ರವರೆಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿಶೇಷ ಯೋಗ್ಯಾಭ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯೋಗ ಮತ್ತು ಧ್ಯಾನದ ಬಗ್ಗೆ ಜಾಗೃತಿ ಮೂಡಿಸಲು ಜ.31 ರಂದು ನಗರದಲ್ಲಿ ಜಾಥಾ ನಡೆಸಲಾಗುತ್ತದೆ. ರಥ ಸಪ್ತಮಿ ಅಂಗವಾಗಿ ನಗರದ ದೀಪಾಯನ ಶಾಲೆಯಲ್ಲಿ 108 ನಮಸ್ಕಾರ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತಂಜಲಿ ಯೋಗ ಸಮಿತಿಯಿಂದ ಜಿಲ್ಲೆಗೆ ಯೋಗ ಪ್ರಚಾರಕರನ್ನು ಆಯ್ಕೆ ಮಾಡಲಾಗುತ್ತಿದೆ. ಅವರಿಗೆ ತಿಂಗಳಿಗೆ 25,000 ಸಾವಿರ ರೂ.ವೇತನ ನೀಡಲಾಗುತ್ತಿದೆ. ಯೋಗ ಉದ್ಯೋಗ ಸೃಷ್ಟಿಸಲಿದೆ. ಯುವಕರಲ್ಲಿ ಯೋಗದ ಬಗ್ಗೆ ಕಡಿಮೆ ಆಸಕ್ತಿ ಇದೆ. ಆದ್ದರಿಂದ ಅವರನ್ನು ಯೋಗದ ಕಡೆಗೆ ಗಮನ ಸೆಳೆಯಲು ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.