ಬಳ್ಳಾರಿ: ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಕೈಗೆತ್ತಿಕೊಂಡಿದ್ದ ಏತ- ನೀರಾವರಿ ಯೋಜನೆಗೆ ಸ್ಥಳೀಯ ಜನಪ್ರತಿನಿಧಿಗಳೇ ಎಳ್ಳು- ನೀರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
2000- 2002 ನೇ ಆಸುಪಾಸಿನಲ್ಲಿ ಅಂದಿನ ಸರ್ಕಾರದ ನೀರಾವರಿ ಖಾತೆ ಹೊಂದಿದ್ದ ಹಾಲಿ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಈ ಯೋಜನೆಗೆ ಮತ್ತಷ್ಟು ಕಾಯಕಲ್ಪ ನೀಡುವ ಮುಖೇನ ಯೋಜನೆ ಅನುಷ್ಠಾನಕ್ಕೆ ವೇಗದ ಸ್ಪರ್ಶ ನೀಡಿದ್ದರು. ಆದರೆ, ಅದ್ಯಾವುದೂ ಕೂಡ ಇಲ್ಲಿ ಸಾಕಾರಗೊಳ್ಳಲಿಲ್ಲ ಎಂಬುದು ಮಾತ್ರ ದಿಟ. ತಾಲೂಕಿನಿಂದ ಅನತಿ ದೂರದಲ್ಲಿರುವ ಈ ಯಾಳ್ಪಿ ಕಗ್ಗಲ್ ಗ್ರಾಮದ ಹೊರವಲಯದಲ್ಲಿ ಈ ಏತ ನೀರಾವರಿ ಯೋಜನೆಯನ್ನ ಸ್ಥಾಪಿಸಲಾಗಿದೆ.
ಆದರೆ, ಇಲ್ಲಿನ ರೈತರ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಲಿಲ್ಲ. ಯಾಳ್ಪಿ, ಕಗ್ಗಲ್, ರೂಪನಗುಡಿ, ಲಿಂಗದೇವನಹಳ್ಳಿ, ಭೈರದೇವನಹಳ್ಳಿ ಸೇರಿದಂತೆ ಇತರ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಅಂದಾಜು ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿತ್ತು. ಆದರೆ ಜನಪ್ರತಿನಿಧಿಗಳು ಕೇವಲ ಚುನಾವಣೆ ಬಂದಾಗ ಮಾತ್ರ ಈ ಯೋಜನೆಯನ್ನ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡುತ್ತಾರೆಯೇ ಹೊರತು ನಂತರ ಯಾರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.