ಬಳ್ಳಾರಿ: ಮಹಾಮಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ನನಗೂ ಕೂಡ ಸಾವಿನ ಭಯದ ಅನುಭವವಾಗಿತ್ತು. ನನಗೇನೂ ಆಗಿಲ್ಲ ಎಂಬ ಆತ್ಮಸ್ಥೈರ್ಯದಿಂದ ಈ ಸೋಂಕನ್ನು ಸಮರ್ಥವಾಗಿ ಎದುರಿಸಿ ಬಂದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಮಗಾದ ಅನುಭವವನ್ನ ಹಂಚಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ಒಳಗಾಗಿದ್ದ ಎರಡು ದಿನಗಳಲ್ಲೇ ಸಾವಿನ ಭಯ ಎದುರಾಗಿತ್ತು. ನಾನು ಸತ್ತು ಹೋಗುತ್ತೇನೇನೋ ಎಂಬ ಅನುಭವ ನನಗಾಯಿತು. ಹೀಗಾಗಿ ಎರಡು ದಿನಗಳ ಕಾಲ ನನ್ನ ಮೊಬೈಲ್ ಫೋನ್ ಆಫ್ ಮಾಡಿದ್ದೆ. ಆದರೆ ನನ್ನಲ್ಲಿರುವ ಆತ್ಮಸ್ಥೈರ್ಯ ನಾನು ಬದುಕುಳಿಯಲು ಹಾಗೂ ಸೋಂಕನ್ನ ಸಮರ್ಥವಾಗಿ ಎದುರಿಸಲು ಸಹಕರಿಸಿತು ಎಂದು ಸಚಿವ ಆನಂದ್ ಸಿಂಗ್ ತಮಗಾದ ಸಾವಿನ ಭಯದ ಅನುಭವದ ಬಗ್ಗೆ ಹೇಳಿಕೊಂಡರು.
ಲೇ ಆನಂದ ನನ್ನನ್ನು ಉಳಿಸೋ:
ಹೊಸಪೇಟೆಯಲ್ಲಿದ್ದ ನನ್ನ ಬಾಲ್ಯದ ಸ್ನೇಹಿತನೊಬ್ಬ ಕೋವಿಡ್ ಸೋಂಕಿಗೆ ಒಳಗಾಗಿದ್ದ. ಅವನು ನನಗೆ ಕರೆ ಮಾಡಿ ಲೇ ಆನಂದ ನನ್ನ ಉಳಿಸೋ ಎಂದಿದ್ದ. ಅವನನ್ನು ಹೊಸಪೇಟೆಯಿಂದ ಕಂಪ್ಲಿಗೆ ಶಿಫ್ಟ್ ಮಾಡಲಾಯಿತು. ಅಲ್ಲಿಂದ ಬಳ್ಳಾರಿಗೆ ಕರೆದೊಯ್ಯುವಾಗ ನನಗೆ ಅವನ ಕರೆ ಬಂತು. ಅದ್ರೆ ದುರದೃಷ್ಟವಶಾತ್ ಅವನು ಮಾರ್ಗ ಮಧ್ಯೆದಲ್ಲಿಯೇ ಅಸುನೀಗಿದ. ಅವನ ಆ ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಧ್ವನಿಸುತ್ತೆ ಎಂದರು.
ಕೋವಿಡ್ ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಬೇಕು. ಇದರಿಂದ ಸಾವಿನ ಭಯವನ್ನ ಹೋಗಲಾಡಿಸಬಹುದು. ಆತ್ಮಸ್ಥೈರ್ಯವೊಂದಿದ್ದರೆ ಈ ಸೋಂಕಿನಿಂದ ಬದುಕುಳಿಯಬಹುದು ಎಂದರು.