ಬಳ್ಳಾರಿ: ಪತ್ನಿಯ ಶೀಲ ಶಂಕಿಸಿದ ಪತಿರಾಯನೋರ್ವ ಮಲಗಿದ್ದ ವೇಳೆ ಮಚ್ಚಿನಿಂದ ಆಕೆಯ ಕತ್ತು ಕುಯ್ದು ಕೊಲೆ ಮಾಡಿರುವ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.
ಸಿರವಾರ ಗ್ರಾಮದ ಹರಿಜನ ಕೇರಿಯ ನಿವಾಸಿ ಸುಂಕಣ್ಣ ಎಂಬಾತ ತನ್ನ ಪತ್ನಿಯನ್ನೇ ಕೊಲೆಗೈದಿರುವ ವ್ಯಕ್ತಿ. ಸುಂಕಣ್ಣ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸುನ್ನಿಪುಮ್ಮ (38) ಕೊಲೆಗೀಡಾಗಿರುವ ಮಹಿಳೆ.
ಕೂಲಿ ಕೆಲಸ ಮುಗಿಸಿಕೊಂಡು ಬಂದು ದಂಪತಿ ಒಟ್ಟಿಗೆ ಮಲಗಿದ್ದರು. ಈ ವೇಳೆ ಗಂಡ ಕುಡುಗೋಲಿನಿಂದ ಪತ್ನಿಯ ಕತ್ತಿಗೆಗೆ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೊಲೆಗೆ ಶೀಲ ಶಂಕೆ ಕಾರಣವೆಂದು ಹೇಳಲಾಗುತ್ತಿದೆ.
ರಾತ್ರಿ ಶವವನ್ನ ಸಾಗಿಸಲು ಆಗದ ಕಾರಣ ರಾತ್ರಿಯಿಡೀ ಶವದ ಪಕ್ಕದಲ್ಲೇ ಮಲಗಿದ್ದ. ಬೆಳಗ್ಗೆ ಕೊಲೆ ಸುದ್ದಿ ಕೇರಿಯ ನಿವಾಸಿಗಳಿಗೆ ಗೊತ್ತಾಗಿ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.