ವಿಜಯನಗರ : ಜಿಲ್ಲೆಯ ಎರಡು ಮೂರು ತಾಲೂಕುಗಳಲ್ಲಿ ಮಕ್ಕಳಲ್ಲಿ ಉಣ್ಣೆ ರೋಗ ಪತ್ತೆಯಾಗಿದ್ದು,ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಹಿಂದೆ ವಿಜಯಪುರ, ಬಾಗಲಕೋಟೆ ಭಾಗದ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಆದರೆ, ಈಗ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿದೆ.
ಎರಡು ವರ್ಷಗಳ ಹಿಂದೆ ಹೊಸಪೇಟೆಯ ಗ್ರಾಮೀಣ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಇದು ಮಾರಣಾಂತಿಕ ಕಾಯಿಲೆ ಅಲ್ಲವಾದರೂ, ಜನರು ಧೂಳು, ಊಟದಲ್ಲಿನ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಉಣ್ಣೆ ಕಾಯಿಲೆ ಸಹಜವಾಗಿ ಹಸು, ದನ ಕರುಗಳಲ್ಲಿ ಕಂಡುಬರುತ್ತದೆ. ಇದು ಪ್ರಾಣಿಗಳಲ್ಲಿ ಗಡ್ಡೆಯ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಇದೀಗ ಚಿಕ್ಕ ಚಿಕ್ಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆತಂಕಕ್ಕೀಡುಮಾಡಿದೆ. ಮೊದಲು ಮಕ್ಕಳಲ್ಲಿ ಸಣ್ಣ ಪ್ರಮಾಣದ ವೈರಲ್ ಫೀವರ್ ಬರುತ್ತದೆ. ಜೊತೆಗೆ ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು, ಮೈಮೇಲೆ ಗಡ್ಡೆಯಾಕಾರದ ಮೊಡವೆಗಳು, ಮುಖದ ಮೇಲಿರುವ ಚರ್ಮ ಕೆಂಪಾಗುವುದು ಇತ್ಯಾದಿಗಳು ಕಂಡು ಬರುತ್ತಿದೆ. ಇದು ಉಣ್ಣೆರೋಗದ ಲಕ್ಷಣವಾಗಿದೆ. ಸದ್ಯ ಮರಿಯಮ್ಮನಹಳ್ಳಿಯಲ್ಲಿ ಒಂದೆರಡು ಪ್ರಕರಣಗಳು ಪತ್ತೆ ಆಗಿದ್ದು, ಈ ಬಗ್ಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಸುವ ಕುರಿತು ಸರ್ಕಾರಕ್ಕೆ ನಿರ್ದೇಶನ ಕೋರಿ ಪಿಐಎಲ್