ಬಳ್ಳಾರಿ: ಎಷ್ಟೇ ಒತ್ತಡದ ಕೆಲಸದಲ್ಲಿ ತೊಡಗಿದ್ರೂ ಕೂಡ ತಮ್ಮ ತಮ್ಮ ಮತದಾನದ ಹಕ್ಕನ್ನ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಮತದಾನ ಜಾಗೃತಿಯ ರಾಯಭಾರಿಯಾಗಿ ಆಯ್ಕೆಯಾದ ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಸಲಹೆ ನೀಡಿದ್ದಾರೆ.
ಬಳ್ಳಾರಿಯಲ್ಲಿಂದು ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಭಾರತ ಸಂವಿಧಾನ ನೀಡಿರುವ ಬಹುದೊಡ್ಡ ಹಕ್ಕು ಮತ ಚಲಾಯಿಸೋದು. ಅದನ್ನ ನಾವೆಲ್ಲ ಮತದಾನದ ದಿನದಂದು ಮತದಾನ ಮಾಡುವ ಮೂಲಕ ಚಲಾಯಿಸಬೇಕು. ಕೆಲಸದ ಒತ್ತಡ ಅಥವಾ ಇನ್ಯಾವುದೋ ಕುಂಟು ನೆಪವೊಡ್ಡಿ ಮತ ದಾನದ ಹಕ್ಕನ್ನ ಚಲಾಯಿಸದೇ ಇರಬಾರದು ಎಂದರು. ಸೂಕ್ತ ಹಾಗೂ ಸಮರ್ಥ ಅಭ್ಯರ್ಥಿಯನ್ನ ಆಯ್ಕೆಗೊಳಿಸಬೇಕಾದ್ರೆ ಮತದಾನದ ಹಕ್ಕನ್ನ ಎಲ್ಲರೂ ಚಲಾಯಿಸಬೇಕು.
ಇಂತಹ ಮಹತ್ವದ ಹಕ್ಕನ್ನ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನ ನನ್ನ ಹೆಗಲ ಮೇಲೆ ಹೊರಿಸಿರುವುದು ನಿಜಕ್ಕೂ ಶ್ಲಾಘನಾರ್ಹ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಗೆ ನಾನೆಂದಿಗೂ ಚಿರ ಋಣಿಯಾಗಿರುವೆ. ಕಳೆದ ಬಾರಿ ಅಂಗ ವಿಕಲೆಯೊಬ್ಬರನ್ನ ಮತದಾನ ಜಾಗೃತಿಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ನನ್ನನ್ನು ಆಯ್ಕೆ ಮಾಡಿಕೊಂಡಿರುವುದು ನನಗೆ ಸಂತಸವಾಗಿದೆ ಎಂದರು.
ಪ್ರತಿಯೊಬ್ಬರೂ ಮತಗಟ್ಟೆಗೆ ತೆರಳಿ, ಮತಚಲಾಯಿಸಿ:
ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಎತ್ತಿಹಿಡಿಯಲು ಮತದಾನದ ಹಕ್ಕನ್ನ ಚಲಾಯಿಸಬೇಕು. ನನ್ನಂಥ ವಯೋವೃದ್ಧರೇ ಆಯಾ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನದ ಹಕ್ಕನ್ನ ಚಲಾಯಿಸುತ್ತಿರುವಾಗ, ಯುವ ಜನರು ಕೂಡ ತಪ್ಪದೇ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.