ಬಳ್ಳಾರಿ: ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಪ್ರಬಲವಾಗಿ ವಿರೋಧಿಸಿದ್ದಾರೆ.
ಓದಿ: ಪ್ರೇಮ ವೈಫಲ್ಯ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಬಳ್ಳಾರಿ ನಗರ ಶಾಸಕರ ಕೊಠಡಿಯಲ್ಲಿಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅತ್ಯಂತ ತರಾತುರಿಯಲ್ಲಿ ವಿಜಯನಗರ ಜಿಲ್ಲೆಯನ್ನಾಗಿ ಅಧಿಕೃತ ಘೋಷಣೆ ಮಾಡಿರುವುದು ತರವಲ್ಲ. ಕೇವಲ ಐದು ತಾಲೂಕುಗಳಿಗೆ ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ಸೀಮಿತಗೊಳಿಸಿರುವುದು ಕೂಡ ನಮ್ಮೆಲ್ಲರ ಭಾವನೆಗಳನ್ನು ಕೆರಳಿಸಿದೆ.
ಹೀಗಾಗಿ ಹಂಪಿ ಮತ್ತು ಹೊಸಪೇಟೆ ಡ್ಯಾಂ ಇಲ್ಲದೆ ಬಳ್ಳಾರಿ ಜಿಲ್ಲೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಬಳ್ಳಾರಿ ಜಿಲ್ಲೆಯನ್ನು ಮತ್ತೆ ಒಗ್ಗೂಡಿಸಲು ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಹಲವು ನಾಯಕರೊಂದಿಗೆ ಮಾತನಾಡಿದ್ದೇನೆ ಎಂದರು.
2023ರ ಅವಧಿಗೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ವಿಜಯನಗರವನ್ನು ಬಳ್ಳಾರಿಗೆ ಸೇರಿಸುವುದು ಶತಃಸಿದ್ಧ. ಆ ದೇವರು ಮುಂದೆ ಒಗ್ಗೂಡಿಸುವ ಶಕ್ತಿ ಕೊಡುವ ವಿಶ್ವಾಸವಿದೆ. ಆ ಜಿಲ್ಲೆಯ ಜನರ ಅಭಿಪ್ರಾಯಕ್ಕೆ ಧಕ್ಕೆ ತರದೆ ಅಲ್ಲಿನ ಜನಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡು ಮತ್ತೆ ಅಖಂಡ ಬಳ್ಳಾರಿ ಜಿಲ್ಲೆ ಮಾಡಲಾಗುವುದು. ಬಳ್ಳಾರಿ ಜಿಲ್ಲೆ ವಿಭಜನೆಯಾಗಬಾರದಿತ್ತು ಎಂದರು.
ಈ ಹಿಂದಿನಿಂದಲೂ ನಾನು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದೆ. ಈ ಸಮಯದಲ್ಲಿಯೂ ಕೂಡ ನಾನು ಅಖಂಡ ಬಳ್ಳಾರಿ ಹೋರಾಟಗಾರರ ಪರವಾಗಿಯೇ ನಿಲ್ಲುತ್ತೇನೆ. ಕೋರ್ಟ್ ಮೊರೆ ಹೋಗಿ ಹೋರಾಟ ಮಾಡೋ ಹೋರಾಟಗಾರರಿಗೆ ಸಾಥ್ ನೀಡುತ್ತೇನೆ ಎಂದರು.