ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ವೆಂಟೆಲೇಟರ್ ಕೊರತೆಯಿದೆ. ಆಗಾಗಿ, ಮಹಾಮಾರಿ ಈ ಕೊರೊನಾ ನಿಯಂತ್ರಿಸಲಾಗದ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಳದ ಜೊತೆ ಜೊತೆಗೆ ಸೋಂಕಿತರ ಸಾವಿನ ಸರಣಿ ಕೂಡ ಮುಂದುವರೆದಿದೆ. ಕಳೆದ ಹತ್ತು ದಿನಗಳಲ್ಲಿ 100ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 735ಕ್ಕೆ ಏರಿಕೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟುತ್ತಿದೆ. ಸದ್ಯ ಜಿಲ್ಲೆಯಲ್ಲಿ 9531 ಸಕ್ರಿಯ ಪ್ರಕರಣಗಳಿದ್ದು, 5002 ಸೋಂಕಿತರು ಹೋಮ್ ಐಸೊಲೇಷನ್ನಲ್ಲಿದ್ದಾರೆ. 829 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 1200 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಇದೆ. ಆದರೆ ಜಿಲ್ಲೆಯಲ್ಲಿ ಕೇವಲ 60 ವೆಂಟಿಲೇಟರ್ಗಳು ಮಾತ್ರ ಇದ್ದು, ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಸಮರ್ಪಕವಾಗಿ ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಕೂಡ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಅದರ ಜೊತೆಗೆ ಗಂಭೀರ ಸ್ಥಿತಿಯಲ್ಲಿರುವವರು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ ಎಂದು ಡಿಸಿ ಮಾಲಪಾಟಿ ಹೇಳಿದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್ ಬೆಡ್ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಈಗ ಜಿಂದಾಲ್ ಕಂಪನಿಯಲ್ಲಿ ಮೇ 9 ರೊಳಗೆ 1 ಸಾವಿರ ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅದರ ಜೊತೆಗೆ ಇನ್ನೂ 50 ವೆಂಟಿಲೇಟರುಗಳ ಪೂರೈಕೆಗಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಆರ್ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ವಿಳಂಬವಾಗುತ್ತಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕೋವಿಡ್ ಟೆಸ್ಟಿಂಗ್ ಲ್ಯಾಬ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದು ಮಾಹಿತಿ ನೀಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನವೂ 1 ಸಾವಿರ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಈ ಜಿಲ್ಲೆಗೆ ಬೇಕಾಗುವ 27 ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಕರ್ನಾಟಕ ಸೇರಿದಂತೆ ನೆರೆಹೊರೆಯ ರಾಜ್ಯಗಳಿಗೆ ನಿತ್ಯ 800 ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ ಡಿಸಿ ಮಾಲಪಾಟಿ ತಿಳಿಸಿದರು.