ಬಳ್ಳಾರಿ: ಹಿಂದೂ ಧರ್ಮದ ಮಹಾನ್ ಗ್ರಂಥ ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಅವರನ್ನ ಕೀಳು ಜಾತಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ವಿರುದ್ಧ ವಾಲ್ಮೀಕಿ ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡ ಬಿ.ರುದ್ರಪ್ಪ, ಕರ್ನಾಟಕ ವಿಧಾನ ಮಂಡಲ ಅಧಿವೇಶನದ ಶೂನ್ಯ ವೇಳೆಯಲ್ಲಿ ಚರ್ಚಿಸುತ್ತಿರುವಾಗ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ವಾಲ್ಮೀಕಿ ಮಹರ್ಷಿ ಅವರನ್ನ ಕೀಳು ಜಾತಿ ಎಂದು ಸಂಬೋಧಿಸಿ ಇಡೀ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ.
ಕೂಡಲೇ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ವಾಲ್ಮೀಕಿ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರ ಕೂಡಲೇ ಅವರ ವಿರುದ್ಧ ಪರಿಶಿಷ್ಠ ಜಾತಿ ಮತ್ತು ಪಂಗಡ ಕಾಯ್ದೆ ಅಡಿಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘ, ಆದಿವಾಸಿ ಬುಡಕಟ್ಟುಗಳ ವೇದಿಕೆ, ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತಿ ವೇದಿಕೆ, ಮಹರ್ಷಿ ವಾಲ್ಮೀಕಿ ಯುವ ಘರ್ಜನೆ ಸೇನೆ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಏಕಲವ್ಯ ಯುವಪಡೆ, ವಾಲ್ಮೀಕಿ ರಕ್ಷಣಾ ವೇದಿಕೆ, ರಾಜ್ಯ ನಾಯಕರ ಯುವಸೇನೆ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಹಕ್ಕಬುಕ್ಕರ ವೇದಿಕೆ, ಎಸ್ಸಿ, ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಈ ವೇಳೆ ಹಾಜರಿದ್ದರು.