ಹೊಸಪೇಟೆ : ನಾವು ಕೈಗಾರಿಕೆಗಳ ವಿರೋಧಿಗಳಲ್ಲ. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ವಿಚಾರದಲ್ಲಿ ಯಾಕೆ ನಾಟಕವಾಡ್ತೀರಿ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಭೂಮಿ ಕೊಡಲು ಮುಂದಾದಾಗ ಕಿಕ್ ಬ್ಯಾಕ್ ಪಡೆದಿದ್ದೀರಿ ಎಂದು ಬಿಜೆಪಿಗರು ಆರೋಪಿಸಿದರು. ಈಗ ಬಿಜೆಪಿ ಸರ್ಕಾರದಲ್ಲಿ ಭೂಮಿ ಪರಭಾರೆ ಮಾಡುವಾಗ ನೀವು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಮತ್ತು ಆನಂದ್ ಸಿಂಗ್ ರೀತಿ ನಮಗೆ ಡಬಲ್ ಸ್ಟ್ಯಾಂಡ್ ಇಲ್ಲ. ಯಡಿಯೂರಪ್ಪ ಧೃತರಾಷ್ಟ ಪ್ರೇಮ ಬಿಡಬೇಕು. ಮಗನಿಗಾಗಿ ಏನು ಬೇಕಾದ್ರೂ ಮಾಡ್ತಿದ್ದಾರೆ. ಯಡಿಯೂರಪ್ಪನವರದ್ದೂ ಸಿಡಿ ಇದೆ ಅಂತ ಅವರದೇ ಪಕ್ಷದ ಯತ್ನಾಳ್ ಹೇಳ್ತಾರೆ. ಅದು ಹೊರಗಡೆ ಬಂದ್ರೆ ರಮೇಶ್ ಜಾರಕಿಹೊಳಿ ರೀತಿ ಇನ್ನೊಂದು ಕೇಸ್ ಆಗುತ್ತದೆ ಅಂತಾರೆ ಎಂದು ಕುಟುಕಿದರು.
ಸಚಿವ ಸಿ ಪಿ ಯೋಗೇಶ್ವರ್ ಲ್ಯಾಪ್‌ಟಾಪ್ ಹಿಡ್ಕೊಂಡು ಎಲ್ಲಾ ಮಠಗಳಿಗೆ ಹೋಗಿ ಬರುತ್ತಿದ್ದಾರೆ. ಅವರ ನಂತರ ಸಿಎಂ ಯಡಿಯೂರಪ್ಪ ಅವರ ಮಗ ಎಲ್ಲಾ ಮಠಗಳಿಗೆ ಹೋಗಿ ಬರುತ್ತಿದ್ದಾರೆ ಎಂದು ಹೇಳಿದರು. ಪೆಟ್ರೋಲ್-ಡೀಸೆಲ್ ದರ ಹೆಚ್ಚಳವಾಗುತ್ತಲೇ ಇದೆ, ಅದನ್ನು ತಡೆಯೋಕೆ ಆಗಿಲ್ಲ. ಹೀಗಾಗಿ, ಜನರ ಆಕ್ರೋಶದಿಂದ ಮೋದಿ ಆಧುನಿಕ ಭಸ್ಮಾಸುರನ ತರ ಭಸ್ಮವಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.