ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಉಜಿನಿಯ ಎಂ.ಆರ್. ಹಾಲೇಶ್ (34), ಕೊಟ್ಟೂರಿನ ಚರಣ್ (32) ನಾಪತ್ತೆಯಾಗಿರುವ ಯುವಕರು.
ನಾಪತ್ತೆಯಾದವರು ಜಲಾಶಯದಲ್ಲಿ ಮುಳುಗಿದ್ದಾರೆ ಎಂದು ಅನುಮಾನಿಸಿದ್ದರಿಂದ, ಸ್ಥಳೀಯ ಈಜುಪಟುಗಳು ಮತ್ತು ಅಗ್ನಿಶಾಮಕ ದಳದವರು ಜಲಾಶಯದ ನೀರಿನಲ್ಲಿ ಪೊಲೀಸರ ನೇತೃತ್ವದಲ್ಲಿ ಕೆಲಕಾಲ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಆನಂತರ ದಾವಣಗೆರೆಯಿಂದ ಈಜುಪಟುಗಳನ್ನು ಕರೆಯಿಸಿ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ನಾಪತ್ತೆಯಾದವರಿಗೆ ಈಜು ಬರುತ್ತಿರಲಿಲ್ಲ. ಮಾಲವಿ ಜಲಾಶಯ ವೀಕ್ಷಣೆಗೆ ಕೊಟ್ಟೂರು, ಅಲಬೂರು ಇತರೆ ಕಡೆಗಳಿಂದ 7 ಜನ ಯುವಕರ ತಂಡ ಬಂದಿತ್ತು ಎಂದು ತಿಳಿದುಬಂದಿದೆ. ಹಗರಿಬೊಮ್ಮನಹಳ್ಳಿ ಸಿಪಿಐ ಮಂಜುನಾಥ, ಪಿಎಸ್‌ಐ ಸರಳ ಅವರು ಜಲಾಶಯದ ಸ್ಥಳದಲ್ಲಿ ಪೊಲೀಸ್ ತಂಡದೊಂದಿಗೆ ಇದ್ದರು.
ಇದನ್ನೂ ಓದಿ: ಗುಂಡಿಗದ್ದೆ ಫಾಲ್ಸ್ನಲ್ಲಿ ವ್ಯಕ್ತಿ ಶವ ಪತ್ತೆ: ಸ್ಥಳೀಯರ ಸಹಕಾರದಲ್ಲಿ ಮೃತದೇಹ ಹೊರಕ್ಕೆ