ಬಳ್ಳಾರಿ: ತುಂಗಾಭದ್ರ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ-ಕೋಟೆಯ ತುಂಗಾಭದ್ರ ನದಿ ಸೇತುವೆ ಸಂಪೂರ್ಣವಾಗಿ ಭರ್ತಿಯಾಗುವ ಮೂಲಕ ಸಂಪರ್ಕ ಕಡಿತಗೊಂಡಿದೆ.
ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಕಂಪ್ಲಿ ಕೋಟೆ ಬಳಿ ಪಟ್ಟಣ ಮತ್ತು ಗಂಗಾವತಿ ಮಾರ್ಗದ ಮಧ್ಯೆ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಕಂಪ್ಲಿ- ಕೋಟೆ ಬಳಿಯ ದೇವಸ್ಥಾನಗಳು ಹಾಗೂ ಮೀನುಗಾರರ ಮನೆಗಳಿಗೆ ನೀರು ನುಗ್ಗಿವೆ.
ಕಂಪ್ಲಿ-ಕೋಟೆ ಬಳಿಯ ಭತ್ತ ಹಾಗೂ ಬಾಳೆ ತೋಟಗಳಿಗೆ ನೀರು ನುಗ್ಗಿದೆ. ನದಿ ಪಕ್ಕದಲ್ಲಿರುವ ಕಂಪ್ಲಿ ಕೋಟೆಯ ಮೀನುಗಾರರ ಕುಟುಂಬಗಳು ಪ್ರತಿ ವರ್ಷ ಪ್ರವಾಹದ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಮುಂಜಾಗ್ರತೆ ವಹಿಸಬೇಕಾಗಿದೆ. ಕಂಪ್ಲಿ ಸೇತುವೆ ಮುಳುಗಿದ್ದರಿಂದ ಎರಡು ಜಿಲ್ಲೆಗಳ ನಡುವಿನ ಸಂಪರ್ಕ ಕಡಿತವಾಗಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನದಿ ಪಾತ್ರದ ಜನರು ಮುಂಜಾಗ್ರತೆ ವಹಿಸಬೇಕಾಗಿದೆ. ಕಂಪ್ಲಿ ಸೇತುವೆ ಮುಳುಗಿದ್ದರಿಂದ ಎರಡು ಜಿಲ್ಲೆಗಳ ನಡುವಿನ ಸಂಪರ್ಕ ಕಡಿತವಾಗಿದೆ. ಕಂಪ್ಲಿ ಪಟ್ಟಣ ಸೇರಿದಂತೆ ಬಳ್ಳಾರಿ, ಕುರುಗೋಡು ಭಾಗಗಳ ಜನತೆ ಗಂಗಾವತಿ ಕಡೆ ಹೋಗಲು ಹಾಗೂ ಗಂಗಾವತಿಯಿಂದ ಕಂಪ್ಲಿ ಕಡೆ ಬರುವ ಜನತೆಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ, ಪಟ್ಟಣದ ಜನತೆ ಗಂಗಾವತಿಗೆ ತೆರಳಲು, ಹೊಸಪೇಟೆಗೆ ಹೋಗಿ ಅಲ್ಲಿಂದ ಬೂದಗುಂಪ ಕ್ರಾಸ್‌ನಿಂದ ಗಂಗಾವತಿಗೆ ತೆರಳಬೇಕಿದೆ.
ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಸಚಿವ ಆನಂದ್ ಸಿಂಗ್
ತುಂಗಾಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಣೆಗೂ ಮುನ್ನ ಗಂಗಾಪೂಜೆ ಮಾಡಲಾಯಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ತುಂಗಭದ್ರಾ ಜಲಾಶಯ ಸುಮಾರು 40 ವರ್ಷದ ನಂತರ ಇಷ್ಟು ಬೇಗ ಅಣೆಕಟ್ಟೆ ತುಂಬಿದೆ. ಇದರಿಂದ ಲಕ್ಷಾಂತರ ರೈತರು ಖುಷಿಯಲ್ಲಿದ್ದಾರೆ. ಭಾರತೀಯ ಸಂಸ್ಕೃತಿಯಂತೆ ಬಾಗೀನ ಅರ್ಪಿಸಿದ್ದೇನೆ. ಗಂಗಾಮಾತೆ ರೈತರಿಗೆ ಒಳ್ಳೆಯದು ಮಾಡಲಿ ಅಂತಾ ಬಾಗೀನ ಅರ್ಪಿಸಿದ್ದೇನೆ. ಗಂಗಾಮಾತೆ ಶಾಂತವಾಗಿ ಹರಿದು ಸಮುದ್ರ ಸೇರಲಿ ಅಂತಾ ಆಶಿಸುತ್ತೇನೆ ಎಂದರು.
ಸಿದ್ದರಾಮೋತ್ಸವ ಆಯೋಜನೆ ವಿಚಾರ ಬಗ್ಗೆ ಮಾತನಾಡಲು ನಿರಾಕರಿಸಿದ ಆನಂದ್ ಸಿಂಗ್ ಟೀಕೆ ಟಿಪ್ಪಣಿ ಸಹಿಸಿಕೊಳ್ಳುತ್ತೇನೆ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಆ ಬಗ್ಗೆ ಜನ ತೀರ್ಮಾನ ಮಾಡ್ತಾರೆ. ನಾನು ಹೆಚ್ಚು ಕಮೆಂಟ್ ಮಾಡಲ್ಲ. ಈ ವಿಚಾರ ಕರಡಿ ಸಂಗಣ್ಣನವರು ಮಾತನಾಡುತ್ತಾರೆ ಅಂತ ಹೇಳಿ ಆನಂದ್ ಸಿಂಗ್ ಜಾರಿಕೊಂಡರು.
ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳು ಓಪನ್: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ತೆರೆದು 1.18 ಲಕ್ಷ ಕ್ಯುಸೆಕ್ ನೀರು ಇಂದು ನದಿಗೆ ಹರಿಸಲಾಗಿದೆ. ಒಟ್ಟು 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. 1.14 ಲಕ್ಷ ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಹಂಪಿಯ ಸ್ನಾನಘಟ್ಟ, ಚಕ್ರತೀರ್ಥ, ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ನಿನ್ನೆ ಮುಳುಗಡೆಯಾಗಿದ್ದವು. ಇಂದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎಂದರು.