ಬಳ್ಳಾರಿ : ಮಹಾಮಾರಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಗಣಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಮಾಡಲಾಗಿದೆ. ಇದರಿಂದ ಗರ್ಭಿಣಿಯರ ಹೆರಿಗೆ ಶಸ್ತ್ರ ಚಿಕಿತ್ಸೆಗೂ ಟ್ರಬಲ್ ಶುರುವಾಗಿದೆ.
ಅಂದಾಜು 27246 ಮಂದಿ ಗರ್ಭಿಣಿಯರು ಈಗ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಯ ಆಂಧ್ರದ ಗಡಿಭಾಗದ ನಾನಾ ಹಳ್ಳಿಗಳು ಸೇರಿ ಜಿಲ್ಲೆಯ ನಾನಾ ಗ್ರಾಮೀಣ ಪ್ರದೇಶದ ರೈತಾಪಿವರ್ಗ, ಬಡ-ಕೂಲಿಕಾರ್ಮಿಕ ಕುಟುಂಬಸ್ಥರು ಈ ಆಸ್ಪತ್ರೆಗೆ ಬಂದು ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ವಿಮ್ಸ್ ಸೇರಿ ಜಿಲ್ಲೆಯ ಆಯಾ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು.
ಅವೆಲ್ಲವೂ ಈಗ ಕೋವಿಡ್-19 ಕೇಂದ್ರಗಳಾಗಿವೆ. ಹೀಗಾಗಿ, ಆಯಾ ಸರ್ಕಾರಿ ಕೋವಿಡ್-19 ಆಸ್ಪತ್ರೆಗಳಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ಸೇರಿ ಸಾಮಾನ್ಯ ಆರೋಗ್ಯ ಸೇವೆ ಇದ್ದರೂ ಕೂಡ ಕೋವಿಡ್ ಭಯದಿಂದ ಯಾರೊಬ್ಬರೂ ಕೂಡ ಅತ್ತ ಸುಳಿಯುತ್ತಿಲ್ಲ. ಹೀಗಾಗಿ, ಜಿಲ್ಲೆಯ ಗರ್ಭಿಣಿಯರು ಈ ಬಾರಿ ಸಂಕಷ್ಟದ ದಿನಗಳನ್ನ ಎದುರಿಸುವಂತಾಗಿದೆ.
ಜಿಲ್ಲೆಯ ಆಯಾ ತಾಲೂಕಿನಾದ್ಯಂತ ಗರ್ಭಿಣಿಯರ ವಿವರ : ಬಳ್ಳಾರಿ ನಗರ- 3127, ಬಳ್ಳಾರಿ ಗ್ರಾಮಾಂತರ- 4054, ಸಂಡೂರು- 2910, ಸಿರುಗುಪ್ಪ- 3119, ಹೊಸಪೇಟೆ- 3473, ಹಡಗಲಿ- 2016, ಕೂಡ್ಲಿಗಿ- 3473, ಹಗರಿಬೊಮ್ಮನಹಳ್ಳಿ- 2233,ಹರಪನಹಳ್ಳಿ- 2841 ಸೇರಿ ಒಟ್ಟಾರೆ 27,246 ಗರ್ಭಿಣಿಯರಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂದಾಜಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿ ನಕುಲ್ ಅವರು, ಕೋವಿಡ್ -19 ಜೊತೆ ಜೊತೆಗೆ ನಾವು ರೆಗ್ಯುಲರ್ ಶಸ್ತ್ರಚಿಕಿತ್ಸೆ ರನ್ ಮಾಡಬೇಕು. ಹೀಗಾಗಿ ಬಡ-ಕೂಲಿಕಾರ್ಮಿಕರು ಸರ್ಕಾರಿ ಕೋವಿಡ್-19 ಆಸ್ಪತ್ರೆಗಳಲ್ಲೇ ಹೆರಿಗೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಅಲ್ಲದೇ ಭಾರತೀಯ ವೈದ್ಯಕೀಯ ಸಂಸ್ಥೆಯೊಂದಿಗೆ (ಐಎಂಎ) ನಾವು ಚರ್ಚಿಸಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಬರುವ ಗರ್ಭಿಣಿಯರಿಗೆ ರಿಯಾಯಿತಿ ದರದಲ್ಲೇ ಹೆರಿಗೆ, ಶಸ್ತ್ರಚಿಕಿತ್ಸೆ ನೀಡಬೇಕೆಂದು ಕೋರಿದ್ದೇವೆ. ಅಲ್ಲಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಅಲ್ಲಿಯ ಶುಲ್ಕ ಪಾವತಿಸಬೇಕಾಗುತ್ತೆ ಎಂದಿದ್ದಾರೆ.