ಬಳ್ಳಾರಿ: ಕರ್ನಾಟಕ ರಾಜ್ಯದಲ್ಲಿ ಗೋಲ್ಡನ್ ಚಾರಿಯೇಟ್ ರೈಲು ಪುನರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೇ ನಿಲ್ದಾಣದಲ್ಲಿಂದು ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗದ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ವಿದೇಶಕ್ಕೆ ಹೋಗಿ ವಿಲಾಸಿ ಜೀವನ ಸಾಗಿಸುವ ನಮ್ಮ ಜನರಿಗೆ ಈ ದೇಶದ 15 ಕ್ಕೂ ಹೆಚ್ಚಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡುವ ಅವಕಾಶವನ್ನು ಹಾಲಿ ಸಿಎಂ ಯಡಿಯೂರಪ್ಪನವ್ರು ಒದಗಿಸಿದ್ದರು. ಆದರೆ, ಕಾಲಕ್ರಮೇಣ ನಿರೀಕ್ಷಿತ ಪ್ರಮಾಣದ ಆದಾಯ ಮೂಲಗಳಿಲ್ಲ ಎಂಬ ಕಾರಣವೊಡ್ಡಿ ಈ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಿದ್ದರು ಎಂದರು.
ಗೋಲ್ಡನ್ ಚಾರಿಯೇಟ್ ರೈಲಿನ ಸಂಚಾರ ಪುನರಾರಂಭಿಸಲು ಆಗಿರುವ ಅಡೆತಡೆಗಳ ಬಗ್ಗೆ ಅವಲೋಕಿಸಿರುವೆ. ರಾಜ್ಯ ಸರ್ಕಾರದ ಬಳಿ ಗೋಲ್ಡನ್ ಚಾರಿಯೇಟ್ ನಡೆಸಲಿಕ್ಕೆ ಆಗದೇ ಹೋದಲ್ಲಿ ಕೇಂದ್ರ ಸರ್ಕಾರಕ್ಕೆ ಒಪ್ಪಿಸುವಂತೆ ಮನವಿ ಮಾಡಿರುವೆ. ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಅಂಗಡಿ ತಿಳಿಸಿದ್ರು.