ಹೊಸಪೇಟೆ: ಶ್ರೀ ರಾಮ ಹಂಪಿಯ ಮಾಲ್ಯವಂತ ಗುಡ್ಡದಲ್ಲಿ ಕೆಲ ಕಾಲ ಇದ್ದನೆಂಬ ಹಿನ್ನೆಲೆಯಲ್ಲಿ, ಈ ಸ್ಥಳಕ್ಕೆ ರಾಮನ ಭಕ್ತರು ಆಗಮಿಸಿ ವಿಶೇಷ ಪೂಜೆ ಮಾಡಿಸುತ್ತಾರೆಂದು ರಘುನಾಥ ದೇವಾಲಯದ ಅರ್ಚಕರಾದ ಮನೀಷ್ ಮಾಲ್ಯವಂತ ಮಾಹಿತಿ ಹಂಚಿಕೊಂಡಿದ್ದಾರೆ.
ಸೀತೆಯನ್ನು ಹುಡುಕಿಕೊಂಡು ಬಂದ ಶ್ರೀರಾಮ ಮತ್ತು ತಮ್ಮ ಲಕ್ಷ್ಮಣ ಮಳೆಗಾಲದ ಸಮಯದಲ್ಲಿ ಇಲ್ಲಿ ಕೆಲ ಕಾಲ ಕಳೆದಿದ್ದರು ಎಂಬ ಪ್ರತೀಕ ಮಾಲ್ಯವಂತ ರಘುನಾಥ್ ದೇವಾಲಯದ ಕುರುಹುಗಳು ತಿಳಿಸುತ್ತಿವೆ. ರಾಮನು ಯಾವ ಸ್ಥಳದಲ್ಲಿಯೂ ಕೆಲಕಾಲ ಕುಳಿತುಕೊಂಡಿಲ್ಲ, ಆದರೆ, ಮಾಲ್ಯವಂತ ಬೆಟ್ಟದಲ್ಲಿ ಮಾತ್ರ ಕುಳಿತುಕೊಂಡಿದ್ದಾನೆಂದು ರಾಮಾಯಣ ಕಥೆಗಳು ತಿಳಿಸುತ್ತವೆ.
ಶ್ರೀ ರಾಮ ಮತ್ತು ಲಕ್ಷ್ಮಣ ಮಾಲ್ಯವಂತ ಬೆಟ್ಟಕ್ಕೆ ಬಂದ ಸಮಯದಲ್ಲಿ ಆಂಜನೇಯ ಆನೆಗೊಂದಿಯ ಬೆಟ್ಟದ ಮೇಲೆ ನಿಂತು ಇವರನ್ನು ವೀಕ್ಷಣೆ ಮಾಡುತ್ತಿದ್ದ ಎನ್ನಲಾಗುತ್ತದೆ. ವಿಜಯ ನಗರದ ಸುತ್ತಮುತ್ತಲಿನಲ್ಲಿ ಶ್ರೀ ರಾಮ, ಲಕ್ಷ್ಮಣ ,ಅಂಜೇನೆಯ ಹಾಗೂ ವಾಲಿ ಮತ್ತು ಸುಗ್ರೀವರು ಇಲ್ಲಿದ್ದರು ಎಂದು ಸಾಕಷ್ಟು ಪುರಾವೆಗಳು ಸಿಗುತ್ತವೆ.
ಮಾಲ್ಯವಂತ ದೇವಾಲಯದ ವೈಶಿಷ್ಟ್ಯತೆ: 16ನೇ ಶತಮಾನದಲ್ಲಿ ನಿರ್ಮಿಸಲಾದ ಬೃಹತ್ತಾಕಾರದ ಈ ದೇವಾಲಯದ ಮುಂಭಾಗದಲ್ಲಿ ಒಂದು ವೇದಿಕೆಯನ್ನು ಕಟ್ಟಲಾಗಿದೆ. ಇದರ ಮೇಲೆ ಶ್ರೀ ರಾಮ, ಸೀತೆ ಹಾಗೂ ಲಕ್ಷ್ಮಣ ವಿಗ್ರಹವನ್ನು ಕೆತ್ತಲಾಗಿದೆ. ಕಲ್ಲಿನಲ್ಲಿ ಆಂಜನೇಯನ ಚಿತ್ರವನ್ನು ಬಿಡಿಸಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಶೈಲಿಯಲ್ಲಿ ಕಟ್ಟಿಸಲಾಗಿದೆ. ಇದು ಪೂರ್ವಾಭಿಮುಖವಾಗಿದೆ ಹಾಗೂ ತಲವಿನ್ಯಾಸದಲ್ಲಿ ಗರ್ಭಗೃಹ ಹೊಂದಿದೆ. ಅಂತರಾಳದಲ್ಲಿ ಸ್ತಂಭಗಳುಳ್ಳ ಮಹಾಮಂಟಪವಿದೆ. ಗುಡಿಯ ಉತ್ತರಕ್ಕೆ ದೇವಿಯ ಮಂದಿರವನ್ನು ಕಟ್ಟಲಾಗಿದ್ದು ಈ ಮಂದಿರಕ್ಕೆ ಉನ್ನತವಾದ ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ. ಪೂರ್ವ ಮತ್ತು ದಕ್ಷಿಣದಲ್ಲಿ ಈ ದ್ವಾರಗಳಿಂದ ಗುಡಿಯ ಪ್ರವೇಶವನ್ನು ಮಾಡಬಹುದಾಗಿದೆ. ಶ್ರೀರಾಮ ನೆಲೆಸಿದ್ದ ಎನ್ನುವ ಕಾರಣಕ್ಕೆ ರಾಮನ ಭಕ್ತರು ಇಲ್ಲಿ ವಿಶೇಷ ಪೂಜೆಯನ್ನು ಮಾಡಿಸುತ್ತಾರೆ. ಬಳಿಕ ಕಿಸ್ಕಿಂದ ಬೆಟ್ಟದಲ್ಲಿರುವ ಆಂಜನೇಯನ ದೇವಾಸ್ಥಾನಕ್ಕೆ ಹೋಗುತ್ತಾರೆ.