ದಾವಣಗೆರೆ/ಬಳ್ಳಾರಿ: ಸೂರ್ಯಗ್ರಹಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಜನರು ದೇವರ ಮೊರೆ ಹೋಗಿದ್ದಾರೆ. ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ದಾವಣಗೆರೆಯ ಕೆ.ಬಿ ಬಡಾವಣೆಯ ಶ್ರೀ ರಾಘವೇಂದ್ರ ರಾಯರ ಮಠದಲ್ಲಿ 500 ಕ್ಕೂ ಅಧಿಕ ಜನರು ಪೂಜೆ ಸಲ್ಲಿಸಿದರು.
ಹರಪನಹಳ್ಳಿಯಲ್ಲಿ ಹಬ್ಬಿದ ವದಂತಿಗೆ ಎಕ್ಕದ ಗಿಡಕ್ಕೆ ಪೂಜೆ ಸಲ್ಲಿಸಲಾಗಿದ್ದಾರೆ. ಹರಿಹರದ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ನಿರಂತರ ಅಭಿಷೇಕ ಮಾಡಲಾಗುತ್ತಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ ನಡೆಸಲಾಗುತ್ತಿದೆ.
ಬಳ್ಳಾರಿಯಲ್ಲಿ ಮನೆ ಬಿಟ್ಟು ಹೊರ ಬಾರದ ಜನರು
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ, ಹತ್ತಾರು ಮಹಿಳೆಯರು ಎಕ್ಕೆ ಗಿಡ ಸಿಂಗರಿಸಿ ಪೂಜಿಸಿದರು. ಒಬ್ಬರೇ ಮಕ್ಕಳಿದ್ದವರಿಗೆ ಗ್ರಹಣದಿಂದ ದೋಷವಾಗಲಿದೆ ಎಂಬ ವದಂತಿ ಹಬ್ಬಿದ ಕಾರಣಕ್ಕೆ ಎಕ್ಕೆ ಗಿಡ ಹುಡುಕಿಕೊಂಡು ಹೋಗಿ ಕೆಲವರು ಪೂಜೆ ಸಲ್ಲಿಸಿದ್ದಾರೆ. ಮಾಡ್ಗೇರಿ ತಾಂಡದ ನಿವಾಸಿಗಳು ಗ್ರಹಣದ ವೇಳೆ ಹೊರಗೆ ಬಂದರೆ ಅಪಾಯವಾಗುತ್ತೆ ಎಂಬ ಸುದ್ದಿ ಹಬ್ಬಿದ ಕಾರಣಕ್ಕೆ ಮನೆಯಲ್ಲಿಯೇ ಇದ್ದಾರೆ ಎನ್ನಲಾಗಿದೆ.