ಬಳ್ಳಾರಿ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಾದ್ಯಂತ ಭಾರಿ ಮಳೆ ಸುರಿದ ಪರಿಣಾಮ ದೂರದರ್ಶನ ಮರು ಪ್ರಸಾರ ಕೇಂದ್ರ ಜಲಾವೃತವಾಗಿದೆ. ಈ ವೇಳೆ ಅದರಲ್ಲಿ ಸಿಲುಕಿಕೊಂಡು ಹೊರ ಬರಲಾಗದೆ ಅಪಾಯದಲ್ಲಿದ್ದ ಜೂನಿಯರ್ ಇಂಜಿನಿಯರ್ ಅವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಇಂದು ಬೆಳಗಿನ ಜಾವ ಸಾಕಷ್ಟು ಮಳೆ ಸುರಿದಿದ್ದರಿಂದ ಹರಪನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಇರುವ ದೂರದರ್ಶನ ಮರು ಪ್ರಸಾರ ಕೇಂದ್ರಕ್ಕೆ ಭಾರಿ ಪ್ರಮಾಣದ ಮಳೆಯ ನೀರು ನುಗ್ಗಿದ ಪರಿಣಾಮ ಸಂಪೂರ್ಣವಾಗಿ ಜಲಾವೃತಗೊಂಡಿದೆ. ರಾತ್ರಿ ಡ್ಯೂಟಿಯಲ್ಲಿದ್ದ ಜೂನಿಯರ್ ಇಂಜಿನಿಯರ್ ನೀಲಕಂಠಸ್ವಾಮಿ ಹಿರೇಮಠ ಹೊರಗೆ ಬರಲಾಗದೆ ಪರದಾಡುತ್ತಿದ್ದರು. ಇನ್ನು, ನೀರಿನ ಹರಿವು ಹೆಚ್ಚಾಗುವುದನ್ನು ಮನಗಂಡು ಮೊಬೈಲ್ ಮೂಲಕ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿ ತಮ್ಮ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ.
ಕೂಡಲೇ ರಕ್ಷಣಾ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿ ರಾಮಪ್ಪ ನೇತೃತ್ವದ ಸಿಬ್ಬಂದಿ ಆಗಮಿಸಿ ಇಂಜಿನಿಯರ್ ಅವರನ್ನು ಸುರಕ್ಷಿತವಾಗಿ ಹೊರಗಡೆ ಕರೆತಂದಿದ್ದಾರೆ.
84.4 ಮಿ.ಮೀ ಮಳೆ:
ಹರಪನಹಳ್ಳಿ ತಾಲೂಕಿನಾದ್ಯಂತ ಇಂದು ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, ಕೆರೆ - ಕಟ್ಟೆಗಳು ತುಂಬಿಕೊಂಡಿವೆ. ಹರಪನಹಳ್ಳಿ 84.4 ಮಿ.ಮೀ, ಅರಸಿಕೇರಿ 70.2 ಮಿ.ಮೀ, ಚಿಗಟೇರಿ -30 ಮಿ.ಮೀ, ಹಿರೇಮೇಗಳಗೇರಿ 20 ಮಿ.ಮೀ, ಉಚ್ಚಂಗಿದುರ್ಗ 33.8 ಮಿ.ಮೀ, ತೆಲಿಗಿ -18.2 ಮಿ.ಮೀ, ಹಲವಾಗಲು 48.2 ಮಿ.ಮೀ ಮಳೆಯಾಗಿದೆ.
ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ರಸ್ತೆ ಮೇಲ್ಭಾಗ ನೀರು ಹರಿದು, ತೆಗ್ಗಿನಮಠ, ಗ್ರಂಥಾಲಯ, ಬಿಎಸ್ಎನ್ಎಲ್ ಕಚೇರಿ ಸುತ್ತಮುತ್ತಲು ಅಂಗಡಿ ಮುಂಗಟ್ಟುಗಳು ಜಲಾವೃತವಾಗಿವೆ.