ಬಳ್ಳಾರಿ: ಪಕ್ಕೆಲುಬು ಪದ ಉಚ್ಚರಿಸುವಂತೆ ಬಾಲಕನಿಗೆ ಬಲವಂತ ಮಾಡುತ್ತಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಸಹ ಶಿಕ್ಷಕನನ್ನು ಅಮಾನತುಗೊಳಿಸಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಟಿ. ಚಂದ್ರಶೇಖರಪ್ಪ ಅವರು ಅಮಾನತುಗೊಂಡ ಶಿಕ್ಷಕರಾಗಿದ್ದು, ಪಕ್ಕೆಲುಬು ಎಂಬ ಪದ ಉಚ್ಛಾರಣೆಯನ್ನು ತಮ್ಮ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಹೇಳಿಕೊಟ್ಟಿದ್ದಾರೆ. ಆ ವಿದ್ಯಾರ್ಥಿಯು ಪಕ್ಕೆಲುಬು ಪದ ಉಚ್ಛಾರಣೆ ಸರಿಯಾಗಿ ಮಾಡದೇ ಹೋದಾಗ, ಸಹಶಿಕ್ಷಕ ಚಂದ್ರಶೇಖರಪ್ಪ ಆ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇನ್ನು ಅದನ್ನು ಗಂಭೀರವಾಗಿ ಪರಿಗಣಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ಕುಮಾರ್, ಕೂಡಲೇ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಶಿಕ್ಷಕ ಯಾರೆಂಬುದನ್ನು ಪತ್ತೆಹಚ್ಚಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಇನ್ನು ಅಂತಹ ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಸಚಿವ ಸುರೇಶ್ಕುಮಾರ್ ಅವರ ಪತ್ರ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ತಲುಪುತ್ತಿದ್ದಂತೆಯೇ ಕೂಡಲೇ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿ ಸಿ.ನಾಗರಾಜ್ ಆ ಸಹಶಿಕ್ಷಕರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.