ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯು ನಡೆಸಿದೆ ಎನ್ನಲಾದ ಗಣಿ ಅಕ್ರಮ ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಯವರಿಗೆ ಪಾದಯಾತ್ರೆ ಮಾಡಿದ್ದವರು ಈಗ್ಯಾಕೆ ಮೌನವಹಿಸಿದ್ದಾರೆ ಅನ್ನೋದು ನನಗಂತೂ ಗೊತ್ತಾಗುತ್ತಿಲ್ಲ ಎಂದು ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಗಾರ ಟಪಾಲ್ ಗಣೇಶ ಪ್ರಶ್ನಿಸಿದ್ದಾರೆ.
ಬಳ್ಳಾರಿಯ ಗಣೇಶ ಕಾಲೊನಿಯ ತಮ್ಮ ನಿವಾಸದಲ್ಲಿಂದು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಟಪಾಲ್ ಗಣೇಶ, ಹಿಂದೆ ಗಣಿ ಅಕ್ರಮವನ್ನ ವಿರೋಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನ ಎಲ್ಲ ನಾಯಕರು ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ್ದರು. ಅದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕೂಡ ಆದರು. ಆದರೆ, ಗಡಿ ಧ್ವಂಸ ಹಾಗೂ ಗಡಿ ಗುರುತು ನಾಶ ಪಡಿಸಿರೋ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದಲೂ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ಗಳ ತಂಡವು ಗಡಿಗುರುತು ಪುನರ್ ಸ್ಥಾಪಿಸಲು ಮೀನಮೇಷ ಎಣಿಸುತ್ತಿದ್ದಾರೆ. ಈಗ ಯಾರೂ ಹೋರಾಡುತ್ತಿಲ್ಲ ಎಂದು ಆರೋಪಿಸಿದರು.
ಗಡಿ ವಿವಾದದಲ್ಲಿ ಗ್ರಾಮಗಳ ಸರಹದ್ದಿನಂತೆಯೇ ಗಡಿ ಗುರುತನ್ನ ಪುನರ್ ಸ್ಥಾಪಿಸಬೇಕೆಂಬ ವಾದ ಮಂಡಿಸುವ ಸಿಎಂ ಯಡಿಯೂರಪ್ಪ ಬಿಎಸ್ ವೈ ಅವರು, ಕರ್ನಾಟಕ-ಆಂಧ್ರ ಪ್ರದೇಶದಲ್ಲಿ ಗಡಿ ಗುರುತುಗಳನ್ನು ಪುನರ್ ಸ್ಥಾಪಿಸಲು ಯಾಕೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.