ಬಳ್ಳಾರಿ: ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಶುರುವಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಪಂ ಅಧ್ಯಕ್ಷೆ ಲೀಲಾವತಿ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ 17ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಚಿತ್ರ ಸಹಿತ ಬೆಳೆ ವಿವರ ನಮೂದಿಸುವುದರಿಂದ ಬೆಳೆವಿಮೆ ಪಾವತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಇದು ಅನುಕೂಲವಾಗಲಿದೆ. ರೈತರು ಇದೇ .24ರೊಳಗಾಗಿ ವಿವರ ದಾಖಲಿಸಬೇಕು. ಈ ಕುರಿರು ಕೃಷಿ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.
ಕೊರೊನಾ ಹರಡುವುದನ್ನು ತಡೆಯಲು ಲಾಕ್‍ಡೌನ್ ವಿಧಿಸಿದ್ದ ಹಿನ್ನೆಲೆ ದುಡಿಯಲು ಹೋದ ಕೂಲಿ ಕಾರ್ಮಿಕರು ಮರಳಿ ಗ್ರಾಮಗಳಿಗೆ ಬಂದಿದ್ದು, ಅಂತವರಿಗೆ ಅಂಗನವಾಡಿ ಕೇಂದ್ರಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದೆ. ವಾರಕ್ಕೊಮ್ಮೆ ಅವರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇನ್ನು 29 ಹೊಸ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ 10 ಎಕೋಪಾರ್ಕ್‍ಗಳ ಸ್ಥಾಪನೆ ಮಾಡಲಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ತಾಲೂಕಿನ 11 ಗ್ರಾಪಂಗಳಲ್ಲಿ ಒಣಕಸ ಹಾಗೂ ಹಸಿಕಸವನ್ನು ಸಂಗ್ರಹಣೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಪುಷ್ಪಾವತಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಸಪ್ಪ, ತಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.