ಬಳ್ಳಾರಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನಿರ್ಮಿಸಲಾಗಿದ್ದ ಭಾನುವಾರದ ಸಂತೆ ಮಾರುಕಟ್ಟೆಯನ್ನು ವ್ಯಾಪಾರ ವಹಿವಾಟು ನಡೆಸುವವರ ಬಳಕೆಗೆ ಅನುಕೂಲ ಮಾಡಿ ಕೊಡಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿ ಭಾನುವಾರದ ಸಂತೆ ಮಾರುಕಟ್ಟೆಯನ್ನು ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿತ್ತು. ಆದರೆ, ಅದರೊಳಗೆ ವ್ಯಾಪಾರ ವಹಿವಾಟು ಮಾಡಲು ವ್ಯಾಪಾರಸ್ಥರು ಒಪ್ಪುತ್ತಿರಲಿಲ್ಲ. ಬದಲಾಗಿ ಎದಿರುಗಡೆಯಿದ್ದ ಬಯಲಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದರು.
ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಮ ಪ್ರಸಾತ್ ಮನೋಹರ ಮಾರುಕಟ್ಟೆಯ ಬಗ್ಗೆ ಗಮನ ಹರಿಸಲೇ ಇಲ್ಲ. ಮನೋಹರವರು ವರ್ಗಾವಣೆಯಾದ ನಂತರ ಅಧಿಕಾರಕ್ಕೆ ಬಂದ ನೂತನ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಸಿ ಸಂತೆ ಮಾರುಕಟ್ಟೆ ಬಳಕೆಯ ಕುರಿತು ಚರ್ಚೆ ನಡೆಸಿದರು.
ಜನರಿಗೆ ಮತ್ತು ವ್ಯಾಪರಸ್ಥರಿಗೆ ಮಾರುಕಟ್ಟೆಯ ಪ್ರಯೋಜನ ಹಾಗೂ ಶುಚಿತ್ವದ ಬಗ್ಗೆ ತಿಳಿ ಹೇಳಿದರು. ದಲ್ಲಾಳಿಗಳ ಮತ್ತು ಸಣ್ಣ ವ್ಯಾಪಾರಸ್ಥರ ನಡುವಿನ ವೈಮನಸ್ಸಿನಿಂದ ಮಾರುಕಟ್ಟೆ ಬಳಕೆಯಾಗಿಲ್ಲ ಎಂಬುದನ್ನು ತಿಳಿದುಕೊಂಡ ಡಿಸಿ, ನೀವಾಗಿ ನೀವೇ ಬಗೆಹರಿಸಿಕೊಂಡು ಸಂತೆ ಮಾರುಕಟ್ಟೆ ಬಳಕೆ ಮಾಡಿಕೊಂಡ್ರೇ ಸರಿ, ಇಲ್ಲಾಂದ್ರೆ ಜಿಲ್ಲಾಡಳಿತ ಎಂಟ್ರಿಯಾಗಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಸದ್ಯ ಡಿಸಿ ನಕುಲ್ ಅವರ ಖಡಕ್ ಸೂಚನೆಯ ಮೇರೆಗೆ ಭಾನುವಾರದ ಸಂತೆ ಶುರುವಾಗಿದೆ. ಸಣ್ಣ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ವಹಿವಾಟು ನಡೆಸುವ ಕಾರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬಡ ಹಾಗೂ ಮಧ್ಯಮವರ್ಗದ ವ್ಯಾಪಾರಸ್ಥರು ಖುಷಿಯಿಂದಲೇ ತಮ್ಮ ವ್ಯಾಪಾರ, ವಹಿವಾಟನ್ನು ಮುಂದುವರಿಸಿದ್ದಾರೆ.
ಮಾರುಕಟ್ಟೆಗೆ ಸಿಸಿಟಿವಿ ಕಣ್ಗಾವಲು
ಮಾರುಕಟ್ಟೆಯ ಭದ್ರತಾ ದೃಷ್ಟಿಯಿಂದಾಗಿ ಈಗಾಗಲೇ ಎಪಿಎಂಸಿ ಮಾರುಕಟ್ಟೆ ಸಮಿತಿ ಸಿಸಿ ಕ್ಯಾಮೆರಾಗಳ ಖರೀದಿ ಮತ್ತು ಅಳವಡಿಕೆಗೆ ಅಗತ್ಯ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿಯ ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ ಸಿ ಹೆಚ್ ಮೋಹನ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಅಲ್ಲದೇ, ಸಂತೆ ಮಾರುಕಟ್ಟೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಗೂ ತಯಾರು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.